Tuesday, February 26, 2008

ಜಯಂತ್ AVARA MANASSINDA...

ಸೂರ್ಯನ ಸೋಲು
ಬೆಳ್ಳಿಯ ಚುಕ್ಕಿ
ಕತ್ತಲ ಹೆಕ್ಕಿ
ತಳ್ಳಿತಾಚೆ ನಭದಿಕಳ್ಳ ಹೆಜ್ಜೆ ಇಡುತ

ಪರಸ್ಪರ ದೂರಾಗುತ
ಹೊನ್ನ ಕಿರಣಗಳ ಅವರೋಹಣ
ಕಣ್ಣಮರೆಸಿ,ಬೆಳಕ ಹರಿಸುವಾ
ಇಂದಾದರು ನಮ್ಮದೇ ಜಯವು
ಮನದಿ ನೆನೆವವುಯಾವ ಶಾಪವೋ,
ಇನ್ನಾವ ಪುರುಷಾರ್ಥವೋ?
ಕತ್ತ ಮೀಟಿ,ತಲೆಯ ಕುಣಿಸಿ
ಕ್ಕೊಕ್ಕೊಕ್ಕೊ.....ಕ್ಕೋ!!!!

ಈ ಕವನದ ಮೂಲ ಕರ್ತೃ - ಕುಕ್ಕುಟೇಶ.ಹಕ್ಕುಗಳನ್ನು ಹೆಕ್ಕಲಾಗಿದೆ.

2}ಹೊಸ-ಊರು,ರೋಡು
ನೀವು ಬೆಂಗಳೂರಿನವರೇ..?ಬೆಂಗಳೂರಿಗೆ ಹೋಗಿ ಬಂದಿರೇ?ಹೊಸೂರು ರೋಡ್ ಗೊತ್ತಲ್ಲವೇ.?ಐ.ಟಿ,ಬಿ.ಟಿ ಯವರಾದರಂತೂ ಗೊತ್ತೆ ಇರಬೇಕಲ್ಲವೇ..?ಇದು ಹೊಸೂರು ರೋಡು.ಎಲ್ಲಿಂದ ಎಲ್ಲಿ ನೋಡಿದರೂನಿಂತ ಕಾರು,ಬಸ್ಸು,ಲಾರಿ ಲೋಡು.ಹೀಗಿರಲಿಲ್ಲವಂತೆ...!ವರುಷಗಳ ಹಿಂದೆ,ಇಲ್ಲಿ..ಈ ದಟ್ಟಣೆ,ಸಂಘರ್ಷಣೆ.ವೇಗವಾಗಿ ಓಡುತ್ತಿದ್ದವಂತೆಹಲ-ಕೆಲಬಸ್ಸು ಲಾರಿಗಳು.ಹೌದೌದು,,,ಎಲ್ಲ ಹೇಳುವುದದೇಐಟಿ.ಬಿಟಿ ಯ ಬೆಳವಣಿಗೆ,ಅಪಾರವಂತೆ..!!ಇಲ್ಲಿ ಹೀಗೆ ಒಮ್ಮೆಕಾರಿನಲ್ಲಿ ಕುಳಿತಾಗಓಹ್..ಮರೆತೆನೇ..?ಇಲ್ಲಿಯ ಡ್ರೈವಿಂಗ್ ಹೆಸರು"ಬಂಪರ್ ಟು ಬಂಪರ್".ಭಾಗ್ಯಲಕ್ಷ್ಮಿಯಲ್ಲ !!ಇರಕೂಡದು..ನನ್ನ,ಹಿಂದಿನ ಮುಂದಿನಅಕ್ಕ,ಪಕ್ಕದ ಗಾಡಿಗೂಸೆಂಟಿಮೀಟರ್ ಜಾಗ."ಸಮಯಸಾಧಕರಿದ್ದಾರೆ"ಎಚ್ಚರ.ಒಂದು ಸಂಜೆ,ಮುಚ್ಚಿದ ಕಿಟಕಿ,ಅರಚುವ ಬಾನುಲಿ,ಬೊಮ್ಮನಹಳ್ಳಿ ಜಂಕ್ಶನ್.ಐದು,ಹತ್ತು..ಇಪ್ಪತ್ತುನಿಮಿಷಗಳೋ?ಬೋಡುತಲೆಗೆ ತೊಟ್ಟಿಕ್ಕುವತಣ್ಣನೆ ನೀರ ಹನಿಗಳು.ಐದೈದು ನಿಮಿಷಕ್ಕೊಮ್ಮೆಒಂದು.ಒಂದೇ~ ಹೆಜ್ಜೆ ಇಡುತ....ನಡೆದಿತ್ತು.ಎಂಜಿನ್ ನಿಲ್ಲಿಸುವಂತಿಲ್ಲ,ಮುಖದ ಗಂಟೂ ಬಿಡಿಸುವಂತಿಲ್ಲ.ಪಕ್ಕದಲ್ಲಿ ನಮ್ಮದೋ,ನೆರೆಯವರದ್ದೋಆಫ಼ೀಸೂ - ಬಸ್ಸು.ಬ..ಳ..ಲಿ...ಬೆಂದು,ನಿದ್ರಿಸುವ,ಎಫ಼್.ಎಮ್ ಗಳ ಅಬ್ಬರದಿ ವಿಹರಿಸುವ,ಸಾಫ಼್ಟ್-ವೇರ್ ಎಂಜಿನಿಯರ್ ಗಳು.ನನ್ನ ಕಾರಿಗೂ,ರಸ್ತೆ ವಿ-ಭಜಕಕ್ಕೂ..ಇದ್ದೂದೊಂದೇ ಅಡಿ.ಯಾವುದೋ....ಹಾಡ ಕೇಳುತಮೈಯ್ಯ ಮರೆತವನಎಚ್ಚರಿಸಿದ್ದು,ಸುಂಯ್ಯನೆ ಬಂದು,ಗಕ್ಕನೆ ನಿಂತಸ್ಚೂಟರು..ಮೇಲೊಬ್ಬ ಜೋಕರು.ನಕ್ಕನೊಮ್ಮೆ ನನ್ನ ನೋಡಿನಾನು ನಕ್ಕೆ,ದೇಶಾವರಿ.ಏನು ಟ್ರಾಫ಼ಿಕ್ಕು ಸಾರ್..!ಸರ್ಕಾರ ಅದೇನು ಮಾಡತೈತೋ..?ಅಲ್ಲವೇ..?ಯೋಜನಾ ಆಯೋಗದಲ್ಲಿನಾನಿಲ್ಲವೇ..?ಮತ್ತೊಮ್ಮೆ ನಕ್ಕೆ.ನೀವೂ ಸಾಫ಼್ಟ್ ವೇರಾ..? ಸಾರ್ಹೌದೆಂದೆ.ಬರಿದಾಗದ ಬತ್ತಳಿಕೆ,"ಇನ್ನ ಎಷ್ಟು ವರುಶ ಸಾರ್ ಹಿಂಗೆ..???"ಜಯಂತಬಾಬು

Monday, February 25, 2008

ಅಶೋಕ ತಗಡು ಕಥೆ ಬರೆಯಲಿಲ್ಲ

ರಶ್ಮಿ ಕಣ್ಣು ತೆರೆದಾಗ ಸುತ್ತಲೂ ಒಮ್ಮೆ ನೋಡಿ ಏನೊಂದೂ ತಿಳಿಯದೆ ಮಂಕಾದಳು. ತಾನು ಇಲ್ಲೇಕೆ ಇದ್ದೇನೆ, ಏನು ಈ ನೋವು, ಇದೇನು ಆಸ್ಪತ್ರೆಯೇ.. ಅಯ್ಯೋ ಏಕೆ, ಈ ಡ್ರಿಪ್ ಹಾಕಿದ್ದಾರೆ… ಎಂದುಕೊಳ್ಳುತ್ತಲೇ ಗಾಬರಿಯಾಗಿ ಮತ್ತೆ ಪ್ರಜ್ಞೆ ಕಳೆದುಕೊಂಡಳು. ಯಾರನ್ನಾದರೂ ಕೇಳೋಣ ಎಂದರೆ ಸ್ಪೆಷಲ್ ವಾರ್ಡಿನಲ್ಲಿ ಒಂಟಿ ಬೆಡ್ ಮೇಲಿನ ತಾನು ಮಾತ್ರ. ಪಕ್ಕದಲ್ಲಿ ಹಣ್ಣು-ಎಳೆನೀರುಗಳನ್ನು ಜೋಡಿಸಿಟ್ಟಿದ್ದ ಟಿಪಾಯಿ, ಎದುರಿಗೆ ನೆಟ್ಟಗೆ ನಿಂತಿದ್ದ ಕಬ್ಬಿಣದ ಸರಳಿಗೆ ತಲೆಕೆಳಗಾಗಿ ನೇತುಬಿದ್ದ ಡ್ರಿಪ್ ಸ್ಯಾಚೆ, ಅದರಿಂದ ಸಪೂರ ಕೊಳವೆಯುದ್ದಕ್ಕೂ ಹನಿಯಿಕ್ಕುತ್ತಿದ್ದ ಜೀವ ಜಲ! ಎಲ್ಲವನ್ನೂ ನೋಡುತ್ತಿದ್ದಂತೆ ಅರ್ಥವಾಗತೊಡಗಿತು. ಅಶೋಕನ ನೆನಪಾಯಿತು. ಕನಸಿನಲ್ಲೆಂಬಂತೆ ಅವನ ಹೆಸರನ್ನು ಗುನುಗಿದಳು. ತುಟಿ ಬಿಚ್ಚುತ್ತಿದ್ದಂತೆ ತಲೆಯಲ್ಲಿ ಸಿಡಿಲು ಸಿಡಿದಂತಾಯಿತು. ಅಷ್ಟರಲ್ಲಿ ಅಸಾಧ್ಯ ನೋವು ಆಕೆಯ ಪ್ರಜ್ಞೆಯನ್ನು ಕಿತ್ತುಕೊಂಡಿತ್ತು.
****
ಆಲನಹಳ್ಳಿ ಕೃಷ್ಣರ ಗೀಜಗನ ಗೂಡಿನ ಮುಂದೆ ನೀನೇನು ಕಥೆ ಬರೀತೀಯಾ ಬಿಡೋ ಎಂದು ರಶ್ಮಿ ಹೇಳಿದಾಗ ಅಶೋಕ, ತಗಡು ಕಥೆಗಳನ್ನು ಬರಿಯೋನು ಅನ್ನೋ ಥರ ನನ್ನನ್ನ ಹಂಗಿಸ್ತೀಯಾ. ಆಲನಹಳ್ಳಿ ಗ್ರೇಟ್ ಬಿಡು. ಆದ್ರೆ ನಮ್ಮ ಕಾಲದ ತುರ್ತುಗಳೇ ಬೇರೆ ಅಲ್ವಾ ಎಂದು ಥೇಟು ಅನಂತಮೂರ್ತಿ ಥರ ಡೈಲಾಗ್ ಹೊಡ್ದ. ಮಾತು ಕಥೆಯ ಸುತ್ತ ಸುತ್ತುತ್ತಿದ್ರೂ ಬ್ರಿಗೇಡ್ ರಸ್ತೆಯ ಫುಟ್ಪಾತ್ನಲ್ಲಿ ಹೆಜ್ಜೆ ಹಾಕ್ತಿದ್ದ ಅವರಿಬ್ಬರ ಮನಸ್ಸುಗಳು ಮಾತ್ರ ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದವು.
ಆಕೆಯ ಹೆಗಲ ಬಳಸಿದ ಆತನ ಕೈ ಅವಳ ತೋಳಿನ ಸುತ್ತ ಚಿತ್ತಾರ ಬಿಡಿಸುತ್ತಿದ್ದರೆ, ಅವನ ಸೊಂಟ ಬಳಸಿದ್ದ ಆಕೆಯ ಬೆರಳುಗಳು ಪಕ್ಕೆಲುಬುಗಳ ಜತೆ ಲಾಸ್ಯವಾಡುತ್ತಿದ್ದವು. ಮೂರು ವರ್ಷಗಳ ಹಿಂದೆ ಪಠ್ಯವಾಗಿದ್ದ ತೇಜಸ್ವಿ ಅವರ ಚಿದಂಬರ ರಹಸ್ಯದ ಪಾಠ ಕೇಳುತ್ತಾ, ಕೇಳುತ್ತಾ ಅದರಲ್ಲಿನ ಜಯಂತಿ-ರಫಿ ಜೋಡಿ ನಾವೇ ಎಂದು ಅನ್ನಿಸಿದ ಕ್ಷಣವೇ ಆಚೀಚೆ ಡೆಸ್ಕಗಳ ತುದಿಯಲ್ಲಿ ಕೂತಿದ್ದ ರಶ್ಮಿ- ಅಶೋಕರ ಕಣ್ಣುಗಳು ಕಲೆತಿದ್ದವು.
ಅಂದಿನಿಂದ ರಫಿ ಅಶೋಕನಾಗಿ, ಅಶೋಕ ರಫಿಯಾಗಿ, ರಶ್ಮಿ ಜಯಂತಿಯಾಗಿ, ಜಯಂತಿ ರಶ್ಮಿಯಾಗಿ ಕ್ಯಾಂಪಸ್ಸಿನಿಡಿ ಅವರಿಬ್ಬರ ಜೋಡಿ ಚಿದಂಬರ ರಹಸ್ಯದಂತಹ ಕುತೂಹಲಕ್ಕೆ, ಪ್ರಶಂಸೆಗೆ ಕೊನೆಗೆ ಹೊಟ್ಟೆಕಿಚ್ಚಿಗೂ ಕಾರಣವಾಗಿತ್ತು. ಕಲ್ಲು ಬೆಂಚುಗಳಿಂದ ರಸ್ತೆಯಂಚಿನವರೆಗೆ ಚಿದಂಬರ ರಹಸ್ಯವನ್ನು ಪರಸ್ಪರರು ಕೆದಕುವ ಆಟವಾಡುತ್ತಲೇ ಇದ್ದರು. ಕಾಲೇಜಿನ ಸಹಪಾಠಿಗಳಿಂದ ಉಪನ್ಯಾಸಕರವರೆ, ಕ್ಲರ್ಕ್- ಅಟೆಂಡ್ರು ಕೊನೆಗೆ ಕಾಲೇಜ್ ಬಸ್ಸಿನ ಕಂಡಕ್ಟರನ ವರೆಗೆ ಎಲ್ಲರಿಗೂ ಇವರು ಜನುಮದ ಜೋಡಿಯಾಗಿಬಿಟ್ಟಿದ್ದರು.
ಈಗ ಬೆಂಗಳೂರಿನ ಕಂಪನಿಯೊಂದರಲ್ಲಿ ಅಶೋಕ ಭಾಷಾ ವಿಶ್ಲೇಷಕ. ಅವಳು ಬಿಪಿಒ ಎಂಪ್ಲಾಯಿ. ಕೈತುಂಬ ಸಂಬಳ, ಎದೆ ತುಂಬ ಪ್ರೀತಿ-ಪ್ರೇಮದ ಘಮ. ಇನ್ನೇನು ಬೇಕು ಮದುವೆಯ ಬಂಧನಕ್ಕೆ? ಅಶೋಕನೇನೋ ಹೀಗೇ ತುಂಟಾಟವಾಡಿಕೊಂಡು ಇನ್ನಷ್ಟು ದಿನ ಇದ್ದುಬಿಡುವ, ಆಮೇಲೆ ಮದುವೆ-ಗಿದುವೆ ಇದ್ದದ್ದೇ ಎಂಬ ಆಕಾಂಕ್ಷೆಯಲ್ಲಿದ್ದ. ಆದರೆ, ರಶ್ಮಿಯ ಸ್ಥಿತಿ ಬೇರೆಯದೇ ಆಗಿತ್ತು. ಅವಳಿಗೂ ಇಂತಹ ತುಂಟಾಟಗಳ ತುಡುಗಿನ ಹುಡುಗನ ಚೇಷ್ಟೆಗಳಲ್ಲಿ ದಿನ ಕಳೆಯುವುದೇ ಮೋಜು ಎನಿಸುತ್ತಿತ್ತು. ಆದರೆ, ಮನೆಯವರು ಬಿಡಬೇಕಲ್ಲ.
ಪ್ರತಿ ಬಾರಿ ಸಕಲೇಶಪುರಕ್ಕೆ ಹೋದಾಗಲೂ ಮದುವೆಗೆ ಗೊತ್ತು ಮಾಡೋಣ ಎಂಬುದು ಅಪ್ಪ- ಅಮ್ಮನ ವರಾತ. ಜತೆಗೆ ಅಶೋಕನ ಜತೆ ರೋಡ್ ರೋಮಿಯೋ ಆಟ ಅತಿಯಾಗಿರುವುದೂ ಅವರ ಕಿವಿಗೆ ಬಿದ್ದಿದೆ. ಕಾಲೇಜು ದಿನದಿಂದಲೂ ಅನುಮಾನವಿದ್ದ ಅವರಿಗೆ ಈಗ ಎಲ್ಲವೂ ಖಾತ್ರಿಯಾಗಿಬಿಟ್ಟಿದೆ. ಹೋದ ತಿಂಗಳು ಊರಿಗೆ ಹೋದಾಗ ಅವನ್ಯಾರೋ ಲೆಕ್ಷರ್ ಮಗ ಪೆದ್ದುಗುಂಡನಂತಹವನಿಗೆ ತೋರಿಸಿದ್ದರು. ಮೊನ್ನೆ ತಾನೆ ಅಮ್ಮ, ‘ಅವನು ಒಪ್ಪಿದ್ದಾನೆ. ಎಂಗೇಜ್ಮೆಂಟ್ ಮಾಡೋಣ ಅಂತಿದ್ದಾರೆ. ಮುಂದಿನ ವಾರ ನಾಲ್ಕು ದಿನ ರಜೆ ಹಾಕಿ ಬಾ’ ಎಂದಿದ್ದರು. ಅದಕ್ಕೆ ರಶ್ಮಿ ಹೋಗಮ್ಮ, ನನಗೆ ಅವ ಇಷ್ಟವಿಲ್ಲ ಎಂದೂ ಹೇಳಿದ್ದಳು. ಆದರೆ, ಇವರ ರಫಿ-ಜಯಂತಿ ಕಥೆ ಅವರಿಗೆ ಗೊತ್ತಿಲ್ಲದ್ದೇನಲ್ಲವಲ್ಲ, ಹಾಗಾಗೆ ಅವಳು ಹತ್ತನ್ನೆರಡು ಹುಡುಗರನ್ನ ಬೇಡ ಎಂದಿದ್ದು ಎಂಬುದೂ ಅರ್ಥವಾಗಿತ್ತು. ಅದಕ್ಕಾಗೆ ಅವರು ಈ ಸಂಬಂಧವನ್ನು ಹೇಗಾದರೂ ಮಾಡಿ ಗಟ್ಟಿಮಾಡಿಕೊಂಡು ಇವಳನ್ನು ಹೆದರಿಸಿ-ಬೆದರಿಸಿಯಾದರೂ ಒಪ್ಪಿಸಿ ಮದುವೆ ಮಾಡಿಸಬೇಕು. ಮುಂದೆ ದಿನ ಕಳೆದಂತೆ ಎಲ್ಲಾ ಸರಿ ಹೋಗುತ್ತದೆ ಎಂದು ನಿರ್ಧರಿಸಿಯೇ ಆಕೆಗೆ ಫೋನ್ ಮಾಡಿದ್ದರು.
ಅದನ್ನೆಲ್ಲಾ ಅಶೋಕನಿಗೆ ಹೇಳಿದರೆ, ಆತ ಅದಕ್ಯಾಕೆ ಅಷ್ಟೊಂದು ತಲೆ ಬಿಸಿ. ಆಯ್ತು ಬಿಡು. ನಾಡಿದ್ದು ಬುಧವಾರ ನಮ್ಮ ಆಪತ್ಭಾಂಧವ ಇದ್ದಾನಲ್ಲ. ಸಬ್ ರಿಜಿಸ್ಟ್ರಾರ್ ಅವರತ್ರ ಹೋಗಿ ರಿಜಿಸ್ಟರ್ ಆಗಿಬಿಡೋಣ. ಅದಕ್ಕೇನೂ ಏರ್ಪಾಡು ಬೇಕೋ ಅದನ್ನೆಲ್ಲಾ ರಮೇಶ ನಾನೂ ಮಾಡ್ತೀವಿ. ನೀನೇನೂ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದ.
ಅದೇ ಖುಷಿಯಲ್ಲೇ ಆಕೆ, ಈಗ ಬ್ರಿಗೇಡ್ ರೋಡ್ ರೋಮಿಂಗಿಗೆ ಅವನ ಜತೆ ಹೆಜ್ಜೆ ಹಾಕ್ತಾ ಇದ್ದಳು. ಕಣ್ಣ ತುಂಬ ಮದುವೆಯ ಕನಸು, ಅದೂ ಸಂಬಂಧದ ಹೊಸತನವಲ್ಲದಿದ್ರೂ ಬದುಕಿನ ಘಟ್ಟದ ನಿರೀಕ್ಷೆ ಅವಳನ್ನು ಬೇರೆಯದೇ ಜಗತ್ತಿಗೆ ಕೊಂಡೊಯ್ದಿತ್ತು.
ಒಂದು ದೀರ್ಘ ಓಡಾಟದ ಬಳಿಕ ಇಬ್ಬರೂ ರಾತ್ರಿ ಎಂಟರ ಹೊತ್ತಿಗೆ ಭೀಮಾಸ್ ನಲ್ಲಿ ಚಿಕನ್ ಬಿರಿಯಾನಿ ತಿಂದು ಎಂಜಿ ರಸ್ತೆಯಲ್ಲಿ ಆಟೋ ಹಿಡಿಯಲು ಹೊರಟರು. ಎಂಟು ಗಂಟೆಯ ಟ್ರಾಫಿಕ್ ಬುಸಿಯಲ್ಲಿ ರಸ್ತೆಯ ಆಚೆ ಬದಿಗೆ ದಾಟುವುದೇ ಕಷ್ಟವಾಗಿತ್ತು. ಬರ್ರನೆ ಎರಗುವ ಬಸ್ಸು-ಕಾರುಗಳ ನಡುವೆ ಒಂದಿಷ್ಟು ಜಾಗ ಸಿಕ್ಕಿದ್ದೇ ತಡ ಅಶೋಕ, ರಶ್ಮಿಯ ಕೈ ಹಿಡಿದು ಎಳೆದುಕೊಂಡ ನುಗ್ಗಿದ. ಕ್ಷಣ ಉರುಳುವ ಮೊದಲೇ ಯರ್ರಾಬಿರ್ರಿ ಸ್ಪೀಡಲ್ಲಿ ಬಂದ ಸ್ಕಾರ್ಫಿಯೋ ದಡ್ ಎಂದು ಬಡಿಯಿತು. ಅಶೋಕ ಹಾರಿಬಿದ್ದ. ರಶ್ಮಿ ಸರಕ್ಕನೆ ಹಿಂದಕ್ಕೆ ಜರಿದರೂ ಹಿಂದಿನಿಂದ ಬಂದ ಆಟೋ ತಾಗಿ ಕುಸಿದಳು. ಅಶೋಕನ ತಲೆಗೆ ಬಡಿದ ರೋಡ್ ಡಿವೈಡರ್ ರಕ್ತದ ಮಡುವಲ್ಲಿ ಒದ್ದೆಯಾಗಿತ್ತು. ಬಿಟ್ಟ ಕಣ್ಣು ಬಿಟ್ಟಂತೆಯೇ ಇತ್ತು. ಉಸಿರು ನಿಂತಿತ್ತು.
****
ಆಸ್ಪತ್ರೆಯ ಬೆಡ್ ಮೇಲೆ ರಶ್ಮಿ ಮಲಗಿದ್ದಳು. ಪ್ರಜ್ಞೆಯ ಯಾವುದೋ ಆಳದಲ್ಲಿ ಆಕೆ, ಅಶೋಕ ಜತೆ-ಜತೆಯಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಅಶೋಕ ‘ಅಂತೂ ತಗಡು ಕಥೆ ಬರೆಯಲೇ ಇಲ್ಲ ನೋಡು ನಾನು. ಹ್ಞಾಂ, ಏನಂದ್ಕೊಂಡಿದಿಯಾ ನನ್ನನ್ನ’ ಎಂದು ಛೇಡಿಸುತ್ತಿದ್ದ.

ಸಂಗ್ರಹ ಕವಿತೆಗಳು..

ಅನಾಮಿಕ ಚೆಲುವೆಗೆ,…
ಸವೆಯದ ಹಾದಿಯಲ್ಲೇ ಆಕೆಯ ಒಡನಾಟ
ಜುಳು-ಜುಳಿಸುವ ಮೋಹಕ ಝರಿಯೇ ಸಂಗಾತಿ;
ಆ ಸುಂದರಿಗೆ ಹೊಗಳಿಕೆಯೇ ಕೇಳಿಲ್ಲ!
ಪ್ರೀತಿಯ ಮಾತು ಇನ್ನೆಲ್ಲಿ?

ಹಸಿರು ಹಾವಸೆಗಟ್ಟಿದ
ಕಲ್ಲ ಹಾಸಿನ ಬದಿಯಲ್ಲಿ
ಮಿನುಗುವ ಹೂ
ಕಗ್ಗತ್ತಲ ರಾತ್ರಿಯಲಿ ಮಿಂಚುವ
ಒಂಟಿ ತಾರೆ ಅವಳ ಚೆಲುವು..

ಅನಾಮಿಕಳಾಗೇ ಉಳಿದ
ಆ ಲೂಸಿಯ ಯಾನ ಮುಗಿದಿದೆ
ಸಮಾಧಿಯಲ್ಲಿ!ಈಗುಳಿದಿರುವುದು
ಅವಳ ಹಂಬಲವಷ್ಟೇ!.....

ತಪ್ಪುಗಳ ಪಹರೆಯಲಿ….

ಇಡಿಯಾಗುವುದೊಂದು
ಮೆಲುನಡಿಗೆಯ ಸಾವು.
ನಾನಂದುಕೊಂಡ, ಕನಸಿದ
ಎಲ್ಲವೂ ತದ್ರೂಪದಂತೆ
ನಿಜವಾದರೆ,…..
ಬದುಕೊಂದು ಕೊನೆಯಿಲ್ಲದ
ಯಶಸ್ಸುಗಳ ಹಳಸಲು ಪಲ್ಲವಿ.
ತಪ್ಪು;
ನನ್ನೆಲ್ಲಾ ಅನಿರೀಕ್ಷಿತ ಅನುಭವದಾಗರ.
ಅದಕ್ಕೆಂದೇ ನನಗೆ ನಾನೇ ವಂಚಿಸಿಕೊಂಡಂತೆ
ತಪ್ಪುಗಳಿಗೆ ಒಡ್ಡಿಕೊಳ್ಳುತ್ತೇನೆ ಸದಾ….
ಆದರೂ,
ನಾ ಸರ್ವಶಕ್ತ, ತುಸು ಜಾಗ್ರತೆ ಜತೆಗಿದ್ದರೆ,
ನಾನೀ ಸ್ವರ್ಗದ ಮೆಟ್ಟಿಲು ಜಾರಲಾರೆನೆನ್ನುವ
ಭ್ರಮೆಯ ಕೂಸು;
ತಪ್ಪಿಗೆ ನಾನೇ ಅಂಜುವ ಪರಿ.
ಕೊನೆಗೂ ತಪ್ಪು-
ನಾನಿರುವ ಪರಿಗೊಂದು ರುಜುವಾತು,
ನಾನಾಗುವ ಸ್ಥಿತಿಗೊಂದು ಕದಲಿಕೆ
ವಾಸ್ತವದ ಹೊರಗುಳಿವ ನನಗೊಂದು ಕಣ್ಗಾವಲು.
ತಪ್ಪುಗಳಿಗೆ ಕಿವಿಯೊಡ್ಡಿದಾಗೆಲ್ಲಾ
ನಾನು ಇಂಚಿಂಚೇ ಬೆಳೆದೆ!

ಮಳೆಯೋ ಮಳೆ ಎದೆಯೊಳಗೆ….

ಅವಳ ಕಣ್ಣಿನ ತುಂಬ
ಮಿಂಚು ಮಿನುಗುವ ಬೆಳಕು…
ಹನಿಒಡೆದ ಬಳಿಕದ ಹೊಂಬಿಸಿಲ
ಎಸಳು ಕಿರುನಗೆಯ ಮಂದಲೆ.
ಅವನ ಕುಡಿನೋಟದ
ಸಿಡಿಲ ತಾಕಿದ ಕ್ಷಣ
ಪ್ರೀತಿಯ ಮಳೆ…. ಧೋ…
ಮಳೆ-ಮನಸ್ಸುಗಳ
ಪುಲಕ- ಮೈಯೊಳಗೆ!!
ಜೀವ ಪ್ರೀತಿಯ
ಘಳಿಗೆಗೆ ಹನಿಯ ಬೆಳಗು!!

ಬಾಡಿದ ಹೂ...

ನನ್ನ ತಂಗಿ ತುಮಕೂರಿನ ಸೋಮೇಶ್ವರ ಶಾಲೆಯಲ್ಲಿ ಓದುತ್ತಿದ್ದಾಗ ಅವಳ ಒಬ್ಬರು ಮಿಸ್ ಅವಳಿಗೂ ಅವಳ ಸ್ನೇಹಿತೆಯರಿಗೂ ಬಹು ಪ್ರಿಯವಾಗಿದ್ದರು.ಮಿಸ್ ನ ಬಗ್ಗೆ ದಿನವೂ ಮನೆಯಲ್ಲಿ ಬಂದು ವರದಿ ಒಪ್ಪಿಸುತ್ತಿದ್ದಳು.`ನಂ ಮಿಸ್ ಅಷ್ಟು ಒಳ್ಳೆಯವರು ಇಷ್ಟು ಒಳ್ಳೆಯವರು....,ಮಿಸ್ಸು ಎಷ್ಟು ಚೆನ್ನಾಗಿ ಪಾಠ ಮಾಡ್ತಾರೆ, ಮಿಸ್ಸಿಗೆ ಕೋಪಾನೇ ಬರಲ್ಲ... ಇವತ್ತು ಮಿಸ್ ಏನ್ ಹೇಳುದ್ರು ಗೊತ್ತಾ...,ಮಿಸ್ ನನ್ನ ಇವತ್ತು ಹೊಗಳುದ್ರು...,ಮಿಸ್ ಎಷ್ಟು ಚೆನ್ನಾಗಿದ್ದಾರೆ ..., ಮಿಸ್ ಇವತ್ತು ಹೊಸ ಸೀರೆ ಉಟ್ಟು ಬಂದಿದ್ರು... ಹೀಗೆ...
ಒಟ್ಟಿನಲ್ಲಿ ಅವರ್ಯಾರೋ ಮಿಸ್ಸು ತಮ್ಮ ವಿದ್ಯಾರ್ಥಿಗಳ ಮನದ ತುಂಬಾ ಆವರಿಸಿಕೊಂಡು ಬಿಟ್ಟಿದ್ದರು
ಹೀಗಿರುವಾಗ ಒಮ್ಮೆ `ನಂ ಮಿಸ್ಸಿಗೆ ಮದುವೆಯಂತೆ ಇನ್ನು ಒಂದು ತಿಂಗಳು ಅವರು ಸ್ಕೂಲಿಗೆ ಬರುವುದಿಲ್ಲವಂತೆ' ಅಂತ ತುಂಬಾ ಬೇಜಾರು ಮಾಡಿಕೊಂಡು ಹೇಳಿದಳು ಅವಳ ಬೇಜಾರು ನೋಡಿ `ಮದ್ವೆ ಮಾಡಿಕೊಂದು ವಾಪಸ್ಸು ಬರ್ತಾರೆ ಬಿಡು' ಅಂತ ಅವಳನ್ನು ಸಮಾಧಾನ ಮಾಡುವ ಹೊತ್ತಿಗೆ ಅಮ್ಮನಿಗೆ ಕಲಿತ ಬುದ್ದಿ ಎಲ್ಲಾ ಖರ್ಚಾಗಿತ್ತು
ಮಕ್ಕಳೆಲ್ಲಾ ಕಾದಿದ್ದೂ ಕಾದಿದ್ದೇ... ಮಿಸ್ ಯಾವಾಗ ವಾಪಸ್ಸು ಬರ್ತಾರೆ ಅಂತಾ...ಅಂತೂ ಮಿಸ್ಸು ವಾಪಸ್ಸು ಬಂದರು ನನ್ನ ಅಮ್ಮನನ್ನೂ ಸೇರಿಸಿ ತಂಗಿಯ ಸ್ನೇಹಿತೆಯ ಅಮ್ಮಂದಿರೆಲ್ಲಾ ಸಮಾಧಾನದ ಉಸಿರು ಬಿಟ್ಟರು!
********************
ನಂತರವೂ ಮಿಸ್ ನ ಬಗ್ಗೆ ತಂಗಿ ಆಗಾಗ ಹೇಳುತ್ತಿದ್ದಳಾದರೂ ಯಾಕೋ ಅದರಲ್ಲಿ ಉತ್ಸಾಹ ಇರುತ್ತಿರಲಿಲ್ಲ. ` ಮಿಸ್ ಯಾಕೋ ಸಪ್ಪಗಿದ್ರು...ಮಿಸ್ಸಿಗೆ ತಲೆನೋವು ಬಂದಿತ್ತು ಇವತ್ತು...ಅಂತೇನೋ ಒಂದೆರಡು ಬಾರಿ ಹೇಳಿದ ನೆನಪು `ಒಮ್ಮೆ ಮಿಸ್ ನ ಮುಖ ಕೈಯೆಲ್ಲಾ ಗಾಯ ಆಗಿಬಿಟ್ಟಿತ್ತಮ್ಮಾ'ಅಂತ ಆತಂಕದಿಂದ ಹೇಳಿದ್ದಳು
ಪರೀಕ್ಷೆ ಹತ್ತಿರ ಬರುತ್ತಿದ್ದುದರಿಂದ ಓದಿನಲ್ಲಿ ಸೀರಿಯಸ್ ಆಗಿ ಮಿಸ್ ಬಗ್ಗೆ ಮಾತಾಡುವುದು ಕಡಿಮೆ ಮಾಡಿದ್ದಾಳೆಂದುಕೊಂಡು ಅಮ್ಮ ಸುಮ್ಮನಾಗಿಬಿಟ್ಟರು ನಾವುಗಳೂ ನಂ ನಮ್ಮ ಪರೀಕ್ಷೆಗಳಿಗೆ ಓದುವ ಭರದಲ್ಲಿ ಅವಳ ಹತ್ತಿರ ಅವಳ ಮಿಸ್ ಬಗ್ಗೆ ಕೇಳಲು ಸಮಯ ಇರುತ್ತಿರಲಿಲ್ಲ
ಒಂದು ದಿನ ಬೆಳಗ್ಗೆ ಶಾಲೆಗೆ ಹೋದವಳು ಅರ್ಧಗಂಟೆಯಲ್ಲೇ ಅಳುತ್ತಾ ಮನೆಗೆ ಬಂದಳು. ಅಮ್ಮ`ಏನಾಯ್ತೇ..ಏನಾಯ್ತೇ...ಅಂತ ಕೇಳಿದರೆ ಬಿಕ್ಕಿ ಬಿಕ್ಕಿ ಅಳುತ್ತಾ `ನಂ ಮಿಸ್ಸು...ನಂ ಮಿಸ್ಸೂ.. ಅನ್ನುತ್ತಿದ್ದಳೇ ಹೊರತು ಬೇರೇನೂ ಹೇಳುತ್ತಿರಲಿಲ್ಲ. `ನಿಮ್ ಮಿಸ್ಸು ನಿಂಗೆ ಏನಾದ್ರೂ ಬೈದ್ರೇನೇ...ಹೊಡದ್ರ...ಅಮ್ಮ ಎಲ್ಲಾ ಕೇಳಿ ಆಯಿತು ಯಾವುದಕ್ಕೂ ಉತ್ತರವಿಲ್ಲ...
ಕೊನೆಗೆ ಪಕ್ಕದ ಮನೆಯರು ವಿಷಯ ತಿಳಿಸಿದರು` ವರದಕ್ಷಿಣೆ ಸಾಕಷ್ಟು ಕೊಡಲಿಲ್ಲ ಅಂತ ನಿಮ್ಮ ಮಗಳ ಸ್ಕೂಲಿನ ಮಿಸ್ಸನ್ನ ಅವರತ್ತೆ ಮನೆಯವರು ಸೀಮೆ ಎಣ್ನೆ ಹಾಕಿ ಸುಟ್ಟು ಬಿಟ್ಟರಂತೆ... ಇವತ್ತಿನ ಲೋಕಲ್ ಪೇಪರಲ್ಲಿ ಬಂದಿದೆ...'
***************
ರಾತ್ರಿ ಎಲ್ಲಾ ತಂಗಿಗೆ ಕೆಂಡದಂಥಾ ಜ್ವರ ಏನೇನೋ ಕನವರಿಸುತ್ತಿದ್ದಳು. ಅವಳು ಪೂರ್ತಿಯಾಗಿ ಹುಶಾರಾಗುವ ವರೆಗೂ ಶಾಲೆಗೆ ಕಳಿಸಲು ಆಗುವುದಿಲ್ಲಾ ಅಂತ ಹೆಡ್ಮಿಸ್ಸಿಗೆ ಹೇಳಲು ಅಮ್ಮ ಹೋದಾಗ `ತುಂಬಾ ಮಕ್ಕಳು ನಿಮ್ಮ ಮಗಳ ಹಾಗೇನೇ ಅಪ್ ಸೆಟ್ ಆಗಿಬಿಟ್ಟಿದ್ದಾರೆ ಆ ಮಿಸ್ಸು ಮಕ್ಕಳ ಫೇವರೆಟ್ ಆಗಿದ್ರು' ಅಂತ ಹೆಡ್ಮಿಸ್ಸು ಅಮ್ಮನಿಗೆ ಹೇಳಿದರಂತೆ
ಬೆಂಕಿ ,ಸೀಮೇ ಎಣ್ಣೆ, ಅಯ್ಯೊ ಸುಡ್ ಬೇಡೀ..' ಅಂತೆಲ್ಲಾ ಮಕ್ಕಳು ನಿದ್ದೆಯಲ್ಲೂ ಎಚ್ಚರದಲ್ಲೂ ಪದೇ ಪದೇ ಹೇಳುತ್ತಾ ಭಯ ಪಡುತ್ತಿದ್ದಾರೆಂದೂ ಅಮ್ಮಂದಿರು ಮಾತಾಡಿ ಕೊಳ್ಳುತ್ತಿದ್ದದ್ದು ನನಗೆ ನೆನಪಿದೆ
*****************
ನನ್ನ ತಂಗಿ ಪೂರ್ತಿಯಾಗಿ ಸಮಾಧಾನ ಮಾಡಿಕೊಳ್ಳಲು ಮೂರು-ನಾಲ್ಕು ತಿಂಗಳೇ ಹಿಡಿಯಿತು. ಅವಳ ಸ್ನೇಹಿತೆಯರಿಗೂ ಬಹುಶಃ ಅಷ್ಟೇ ಸಮಯ ಹಿಡಿದಿರಬೇಕು
*****************
ಈ ಎಲ್ಲಾ ಸಂಗತಿ ನಡೆದು ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳಾಗುತ್ತಾ ಬಂತು
ಈ ಇಪ್ಪತ್ತು ವರ್ಷಗಳಲ್ಲಿ ಭಾರತದ ಚಿತ್ರ ಸಾಕಷ್ಟು ಬದಲಾಗಿದೆ
ವಿಜ್ಞಾನ ,ತಂತ್ರ ಜ್ಞಾನ,ಸಾಫ್ಟ್ ವೇರು,ಹಾರ್ಡ್ ವೇರು ಅಂತೆಲ್ಲಾ ಪ್ರಗತಿಗಳಾಗಿವೆ
2015 ರ ಹೊತ್ತಿಗೆ ಇಂಡಿಯಾನೇ ಸೂಪರ್ ಪವರ್ ಅಂತೆ ಅಂತ ಯಾರಾದರೂ ಹೇಳಿದಾಗ ಮನಸ್ಸು ಹೆಮ್ಮೆಯಿಂದ ಉಬ್ಬುತ್ತೆ
ಆದರೆ ನನ್ನ ತಂಗಿಯ ಮಿಸ್ಸಿನ ಕಥೆ ಇವತ್ತಿಗೂ ಮತ್ತೆ ಮತ್ತೆ ಮರುಕಳಿಸುತ್ತಿದೆ
********************************
ಎಲ್ಲಿ ಹೆಂಗಸರು ಪೂಜೆಗೊಳ್ಳುತ್ತಾರೋ ಅಲ್ಲಿ ದೇವತೆಗಳು ನೆಲೆಸುವರಂತೆ (ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ...)
ಎಲ್ಲಿ ಹೆಂಗಸರನ್ನು ಸುಡಲಾಗುತ್ತದೋ, ಹುಟ್ಟುವ ಮೊದಲೇ ಹೊಸಕಿ ಹಾಕಲಾಗುತ್ತದೋ ಅಲ್ಲಿ ಯಾರು ನೆಲೆಸುತ್ತಾರೆ???
********************************
ನಾನು ಕಾಣದೇ ಹೋದ ನನ್ನ ತಂಗಿಯ ಮಿಸ್ಸಿಗೆ,
ಮತ್ತು ಅಂಥಹ ನೂರಾರು ಸುಟ್ಟು ಕರಕಲಾದ ಹೂಗಳಿಗೆ,
ಪ್ರಪಂಚಕ್ಕೆ ಕಣ್ನು ಬಿಡುವ ಮೊದಲೇ ಹೊಸಕಲ್ಪಟ್ಟ ನೂರಾರು ಕಂದಮ್ಮಗಳಿಗೆ....

ಅವಳು



ಚಂದವಿದ್ದಳು ಗೆಳೆಯ ಅವಳು
ಒಳ್ಳೆ ಮಜಬೂತು ಕುದುರೆ.
ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು
ಬಿಟ್ಟಾಗ ನಗುವ ನಕ್ಷತ್ರ ಮೀನು.
ಅವಳು ಕೂದಲು ಬಿಚ್ಚಿಟ್ಟು ತುಟಿಯಲ್ಲಿ
ಕಚ್ಚಿ ಹೇರುಪಿನ್ನು, ನಗುವ ಹಾಗೆ
ಗಲ್ಲದಲ್ಲೊಂದು ಗುಳಿಯಿತ್ತು ಗೆಳೆಯ,
ತುಂಬು ಕೊರಳಿನ ತುಂಬ ಕಾಡು ಹಾಡು.
ಅವಳ ತಟ್ಟನೆಯ ತಿರುವು ತಿರುವುತ್ತ
ಹರಿವ ಕಪ್ಪು ಟಾರಿನ ದಾರಿ ತಗ್ಗು ಕೆಳಗೆ
ಅಲ್ಲಿ ಏಲಕ್ಕಿ ಮಲೆ ಕೆಂಪು ಕಾಫಿಯ ತೋಟ
ಹಸಿರು ಗಾಳಿಗೆ ಉಲಿವ ಬೇಲಿಯೊಳಗೆ
ಚೀಲ ಬುತ್ತಿಯ ತೋಳೆ ಬರಿ ಕಿತ್ತಳೆ.
.,.,.,.,.,.,..,.,.,,.,,.,,..,.,.,.,.,.,..,.,.,,.,,.,,..,.,.,.,.,.,..,.,.,,.,,.,,..,.,.,.,.,.,..,.,.,,.,,.,,..,.,.,.,.,.,..,.,.,,.,,.,,.
ನನ್ನ ತೋಳುಗಳಲ್ಲಿ


ನನ್ನ ತೆರೆದ ತೋಳುಗಳಲ್ಲಿ ನಿನ್ನ ಎಳೆ ಚೆಲುವು
ಸೆರೆಯಾಗಿದೆ ಓ ದೇವತೆಯೇ…

ನನ್ನ ತುಟಿಯ ನಡುವಿಂದ ಮುತ್ತುಗಳ ನಡುನಡುವೆ
ಪ್ರೀತಿಮಾತುಗಳು ಸೆಲೆಯೊಡೆಯುತ್ತಿವೆ.
ನನ್ನ ಬಿಗಿ ಅಪ್ಪುಗೆಯಿಂದ ಮಾತಿಲ್ಲದೆಯೆ
ನಿನ್ನ ತೆಳ್ಳಗಿನ ದೇಹ ಸರಿಯುತ್ತಿದೆ ದೂರ
ಸಂಶಯದೊಂದು ಸಣ್ಣ ನಡುವಿನ ಹುಡುಗೀ..
ನೀ ಕೊಂಕು ಮಾತಾಡುತಿರುವೆ.
ಮೋಸದ ನೋವಿನ ಸಾಲುಮಾತುಗಳು ನೆನಪಾಗುತಿದೆ
ನಿನಗೆ. ಸುಮ್ಮನೆ ಕೇಳಿಸಿಕೊಳ್ಳುತಿರುವೆ
ಏನೂ ಕೇಳಿಸದೆಯೇ..
ಶಪಿಸುತ್ತಿರುವೆ ನನ್ನ ಹುಮ್ಮಸ್ಸಿಗೆ ನಾನೇ
ನನ್ನ ನಯದ ಲಲ್ಲೆಯಾಟಗಳಿಗೆ,
ಯೌವನಕ್ಕೆ, ನಿತ್ಯ ಬೇಟಗಳಿಗೆ,
ಹೂತೋಟದ ಸದ್ದಿಲ್ಲದ ಆಟಗಳಿಗೆ
ಪ್ರೇಮದ ಹೆಸರಿಲ್ಲದ ಪಿಸುಮಾತಿನ ಹೇಳಿಕೆಗಳಿಗೆ.
ಶಪಿಸುತ್ತಿರುವೆ ಕವಿತೆಗಳ ಮಾಂತ್ರಿಕ ಮೋಡಿಗಳಿಗೆ,
ಅರಿಯದ ಸಣ್ಣ ಹುಡುಗಿಯರ ಸ್ಪರ್ಶಗಳಿಗೆ,
ಅವರ ಕಣ್ಣೀರಿಗೆ, ಕಾಲ ಮೀರಿದ ವಿಷಾದಗಳಿಗೆ.