Friday, February 22, 2008

ಸಂಜೆಯ ಕೆಂಪಿನಲ್ಲಿ ನಿನ್ನ ನೆನಪಾಗಲಿಲ್ಲ ಗೆಳತಿ…


ಪ್ರೀತಿಯ ಗೆಳತಿ,ಅಂದು ಸಂಜೆಯ ಸೂರ್ಯ ನಮ್ಮಿಬ್ಬರನ್ನೂ ಅದ್ಯಾವುದೋ ವಾತ್ಸಲ್ಯ ತುಂಬಿದ ಕಣ್ಣುಗಳೊಂದಿಗೆ ನೋಡುತ್ತಾ ಕತ್ತಲೆಯ ಮನೆಗೆ ಹೋಗುತ್ತಲಿದ್ದ. ಆಗ ತಾನೆ ಬಿದ್ದಿದ್ದ ತುಂತುರು ಮಳೆಯಲ್ಲಿ ಇಡೀ ಮೈದಾನದ ಮೈ ನೆಂದು ಅಪೂರ್ವವಾದ ವಾಸನೆ ಹೊಮ್ಮುತ್ತಿತ್ತು. ಆಗ ತತ್ ಕ್ಷಣ ನನಗೆ ನೆನಪಾದದ್ದು ಹಿಂದೊಂದು ದಿನ ಕಾಲೇಜಿನ ಫೀ ಕಟ್ಟುವಾಗ ಕ್ಯೂನಲ್ಲಿ ನಿನ್ನ ಹಿಂದೆ ನಿಂತಾಗ ನನ್ನ ಇಂದ್ರಿಯಗಳನ್ನೆಲ್ಲಾ ಮಂತ್ರ ಮುಗ್ಧವಾಗಿಸಿದ ನಿನ್ನ ಮುಡಿಯಲ್ಲಿನ ಹೂವ ಘಮ.ನಮ್ಮ ನೂರಾರು ಕನಸುಗಳ ಸೌಧವನ್ನು ಕಟ್ಟುವಷ್ಟು ವಿಶಾಲವಾಗಿದ್ದ ಮೈದಾನದ ನಡು ನಡುವೆ ಒಂದಷ್ಟು ಮಂದಿ ಹುಡುಗ ಹುಡುಗಿಯರು ಕೈ ಕೈಹಿಡಿದು ಓಡಾಡುತ್ತಿದ್ದರು. ಕೆಲವರು ಆಡುವ ಆಟದಲ್ಲಿ ಎಲ್ಲವನ್ನೂ ಮರೆತು ತಲ್ಲೀನರಾಗಿದ್ದರು. ಮತ್ತೊಂದಷ್ಟು ಮಂದಿ ಪ್ರಕೃತಿಯ ಆ ರಮಣೀಯ ಸೌಂದರ್ಯವನ್ನು ಎಡಗಾಲಲ್ಲಿ ಒದೆಯುವ ಭಾವದಲ್ಲಿ ಕುಳಿತು ಶುಷ್ಕವಾದ ಆಲ್‍ಜೀಬ್ರಾ, ಕ್ಯಾಲ್ಕುಲಸ್‌ಗಳಲ್ಲಿ ಮುಳುಗಿದ್ದರು. ಪ್ರಕೃತಿ ತಾನಾಗಿ ಕೊಡಮಾಡುವ ಇಂತಹ ಅಸಂಖ್ಯ ಆನಂದದ ಅವಕಾಶಗಳನ್ನು ಮರೆತು ಎಂದೋ ಒಂದು ದಿನ ಸಿಗುವ ಡಿಗ್ರಿಗಾಗಿ ಇವರು ಯಾಕಿಷ್ಟು ಪರದಾಡುತ್ತಾರೋ ಅಂದುಕೊಂಡೆ. ನಿನ್ನ ಪ್ರೀತಿಯು ನನ್ನ ಆವರಿಸಿಕೊಳ್ಳುವ ಮುನ್ನ ನಾನೂ ಹೀಗೇ ಇದ್ದೆನಲ್ಲಾ ಎಂಬುದು ನೆನಪಾಗಿ, ಮನಸ್ಸು ಹಿಂದಕ್ಕೆ ಹಿಂದಕ್ಕೆ ಓಡಲಾರಂಭಿಸಿತು.ಪ್ರೀತಿ, ಹಾಗಂದರೇನು ಅಂತ ಎಲ್ಲರೂ ಕೇಳ್ತಾರೆ. ಅದೇನು ಅಂತ ಗೊತ್ತಿಲ್ಲದೆ ಎಷ್ಟೋ ಮಂದಿ ಪ್ರೀತಿಸ್ತಾರೆ, ದ್ವೇಷಿಸ್ತಾರೆ, ಒಂದಾಗುತ್ತಾರೆ, ಬೇರೆಯಾಗುತ್ತಾರೆ. ಮನುಷ್ಯನ ಆಸೆ, ಮಹತ್ವಾಕಾಂಕ್ಷೆ, ಆದರ್ಶ, ಸದ್ಗುಣ, ಶಿಸ್ತು, ಆಧ್ಯಾತ್ಮದಂತೆಯೇ ಪ್ರೀತಿಯೂ ಕೂಡ. ಪ್ರೀತಿಗೆ ಆ ಸ್ಥಾನ ಸಾಕು. ಪ್ರೀತಿ ಜೀವನದ ಒಂದು ಭಾಗವಾದರೆ ಸಾಕು. ಪ್ರೀತಿಸುವ ಜೀವಗಳೆರಡು ನಂತರ ಎದ್ದು ಮನೆಗೆ ಹೋಗಿ ಉಣ್ಣಬೇಕು, ದುಡಿಯಬೇಕು. ಪ್ರೀತಿ ಅವಾಸ್ತವ. ಪ್ರೀತಿ ಬೇಜವಾಬ್ದಾರಿತನ. ಪ್ರೀತಿ ಕಪಟ, ಇಲ್ಲದ ಭಾವಗಳನ್ನು ಒಬ್ಬನೇ ವ್ಯಕ್ತಿಯ ಮೇಲೆ ಪ್ರದರ್ಶಿಸುವುದು, ದೇಹದ ಬಯಕೆ, ಹಸಿವುಗಳನ್ನೇ ದೊಡ್ಡ ದೊಡ್ಡ ಪದಗಳ ನೆರಳಲ್ಲಿ ನಿಲ್ಲಿಸಿ ಸುಳ್ಳು ಭಾವನೆಯಲ್ಲಿ ಸಮಯ ಕಳೆಯುವ ಕಪಟತೆ- ಹೀಗೇ ಏನೆಲ್ಲಾ ಮಾತನಾಡುತ್ತಿದ್ದೆ ನಾನು. ನಿನ್ನ ಸನ್ನಿಧಾನದ ಅನುಭೂತಿಯಲ್ಲಿ ಮಿಂದ ತಕ್ಷಣ ನನ್ನ ಮಾತುಗಳೆಲ್ಲಾ ಒಣಗಿದ ಹೂವಿನ ಪಕಳೆಗಳಂತೆ ಎಷ್ಟು ಅನಾಯಾಸವಾಗಿ ಉದುರಿಹೋದವಲ್ಲ! ಮಾತುಗಳ ಸದ್ದೆಲ್ಲಾ ಅಡಗಿ ಹೋಗಿ ಮೌನ ನೆಲೆಯಾಯಿತಲ್ಲ? ಜೀವನವೇ ನಶ್ವರ ಎಂದು ಭಾಷಣ ಮಾಡಿದ ನಂತರ ತೆರೆ-ತೆರೆಯಾಗಿ ಬೀಸುವ ತಂಗಾಳಿಗೆ ಮೆಲುವಾಗಿ ತಲೆದೂಗುವ ಉಪದೇಶಿಯಂತೆ ನನ್ನ ಪಾಡಾಯಿತಲ್ಲ? ಜಗತ್ತನ್ನೇ ಸುಟ್ಟು ಬಿಡುವ ಭೀಕರತೆಯಿಂದ ಅರಚಾಡುವ ಮಗು ಮಗುವಿನ ಮಡಿಲನ್ನು ಸೇರಿದ ಕ್ಷಣ ತನ್ನ ಅಸ್ಥಿತ್ವವನ್ನೇ ಮರೆತು ಒಂದಾಗಿಬಿಡುವಂತೆ ನಾನು ನನ್ನನ್ನೇ ಕಳೆದುಕೊಂಡೆ. ಇದೇನಾ ಪ್ರೀತಿ ಅಂದರೆ?ಪತ್ರ ಮುಗಿದಿಲ್ಲ,
**************
ಅರ್ಧಕ್ಕೇ ನಿಲ್ಲಿಸಿದ ಪತ್ರವನ್ನು ಬರೆಯಲು ಕೂತಾಗಲೆಲ್ಲಾ ಮನಸ್ಸು ವಿಪರೀತ ಹೋರಾಟಕ್ಕೆ ಬೀಳುತ್ತೆ. ಸಂಜೆಯ ಮಂದ ಬೆಳಕಿನ ಹಿನ್ನೆಲೆಯಲ್ಲಿ ಸುಂದರವಾಗಿ ಕಾಣುವ ಮರಗಳಲ್ಲಿರುವ ಗೂಡು ಸೇರುವ ಪಕ್ಷಿಗಳ ನಿರಾಳತೆಯಲ್ಲಿ ನಿನ್ನ ನೆನಪಾಯಿತು. ಮುಂಗಾರಿನ ಮೊದಲ ಮಳೆ ಹನಿ ಶಾಲೆ ಬಿಟ್ಟ ನಂತರ ಓಡಿ ಬಂದು ತಾಯಿಯ ತೆಕ್ಕೆಗೆ ಬಂದು ಬೀಳುವ ಮಗುವಿನ ಹಾಗೆ ನೆಲದ ಒಡಲನ್ನು ಸೇರುವಾಗ ನೀನು ಬಳಿಯಿರಬೇಕಿತ್ತು. ಭರಿಸಲಾಗದ ದುಃಖವನ್ನು, ಅವಮಾನಗಳನ್ನು ಹೊಟ್ಟೆಯಲ್ಲಿ ತುಂಬಿಕೊಂಡು ಜಗತ್ತಿನ ದುಃಖವನ್ನೇ ಮರೆಸುವಂತೆ ನಗಿಸಿದ ಚಾಪ್ಲಿನ್‍ನ ‘ದಿ ಸಿಟಿ ಲೈಟ್ಸ್’ ಸಿನೆಮಾ ನೋಡಿ ಭಾವಿಸುತ್ತಿರುವಾಗ ನೀವು ಪಕ್ಕದಲ್ಲಿರಬೇಕಿತ್ತು - ಹೀಗೆ ಎಂದೂ ನನಗೆ ಅನ್ನಿಸಿಯೇ ಇಲ್ಲ. ಅನ್ನಿಸುವುದೇ ಇಲ್ಲ. ಹೀಗಿದ್ದೂ ನಿನಗೆ ಬರೆಯುವ ಪತ್ರದಲ್ಲಿ ಕಾಡಬೇಡ ಕನಸಲಿ ಬಂದು ಎಂದೇಕೆ ಸುಳ್ಳು ಹೇಳಬೇಕು ಅರ್ಥವಾಗುವುದಿಲ್ಲ. ನಾನದೆಷ್ಟೋ ಪ್ರೇಮ ಪತ್ರಗಳನ್ನು ಓದಿದ್ದೇನೆ, ಪ್ರೇಮ ನಿವೇದನೆಯ ಹಾಡುಗಳನ್ನು ಕೇಳಿದ್ದೇನೆ ಆದರೆ ಎಂದೂ ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು…’ ಅಂತ ನಿನ್ನ ಕೈಹಿಡಿದು ಹೇಳಬೇಕು ಅನ್ನಿಸೋದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಿನಗೊಂದು ಸಲ ಅಪರಾತ್ರಿಯಲ್ಲಿ ಫೋನ್ ಮಾಡಿ ‘ಐ ಲವ್ ಯೂ ಕಣೇ…’ ಅಂತ ಹೇಳೋಕಾಗಿಲ್ಲ. ಇಷ್ಟಕ್ಕೂ ನೀನೇಕೆ ನನಗೆ ಇಷ್ಟವಾಗ್ತಿದ್ದೀಯ ಅನ್ನೋದೇ ನನಗಿನ್ನೂ ಗೊತ್ತಾಗಿಲ್ಲ.
ಮೊನ್ನೆ ಹಾಗೇ ಲಹರಿ ಹಿಡಿದು ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ ಒಂದು ವೇಳೆ ನಾನೊಂದು ಮಳೆಯ ಹನಿಯಾಗಿದ್ದರೆ… ಎಂದು ಯೋಚಿಸುತ್ತಿದ್ದೆ. ದೂರದ ಆಗಸದಿಂದ ಗುರಿಯಿಟ್ಟ ಬಾಣದ ಹಾಗೆ ನೆಲೆದೆಡೆಗೆ ಚಿಮ್ಮುತ್ತಾ ಬರುವಾಗ ಸಿಗುವ ಅನುಭವ ಎಂಥದ್ದು, ನನ್ನ ಮನಸ್ಸಿನಲ್ಲಿ ಆಗ ಏನು ನಡೆಯುತ್ತಿರಬಹುದು, ಬಿಟ್ಟು ಬಂದ ಮುಗಿಲಿನ ನೆನಪು ಕಾಡುತ್ತದೆಯೋ ಇಲ್ಲ ಸೇರಬೇಕಾದ ಭುವಿಯ ಒಲವು ನೆನಪಾಗುತ್ತದೆಯೋ ಇಲ್ಲ, ಸುತ್ತ ನನ್ನ ಹಾಗೆಯೇ ಭುವಿಯೆಡೆಗೆ ಬೀಳುವ ಅನೇಕ ಬಿಂದುಗಳೊಂದಿಗೆ ಕುರಿಯ ಮಂದೆಯಲ್ಲೊಂದರಂತೆ ಕಣ್ಣು ಮುಚ್ಚಿಕೊಂಡು ಧುಮುಕಿಬಿಡುತ್ತಿದ್ದೆನೋ… ಕೈಲಿದ್ದ ಕಾಫಿ ಲೋಟ ಸಣ್ಣಗೆ ಹಗುರಾಗುತ್ತಿತ್ತು. ಓದಲೇಬೇಕು ಅಂತ ಲೈಬ್ರರಿಯಿಂದ ತಂದಿಟ್ಟುಕೊಂಡಿದ್ದ ಪುಸ್ತಕ ಮೇಜಿನ ಮೇಲಿತ್ತು. ನನ್ನಾಣೆಗೂ ಆಗ ನಿನ್ನ ನೆನಪಾಯಿತು ಕಣೆ… ಯಾತಕ್ಕೆ ಅಂತೀಯ, ನಾನು ಮಳೆಯ ಹನಿಯಾದರೆ ನೀನೇನಾಗಬೇಕೆಂದಿರುವೆ ಅಂತ ಕೇಳಬೇಕನ್ನ್ಸಿಸಿತು. ಮರುಕ್ಷಣವೇ ನೀನು ನನ್ನ ಈ ಕಲ್ಪನೆಯನ್ನು ಕೇಳಿ ಬೆರಗಾಗಬಹುದು ಅಂದುಕೊಂಡೆ. ಇಲ್ಲ, ಹಿಂದೊಂದು ಬಾರಿ ನಾನು ಹೀಗೆ ಏನೋ ಕೇಳಿದಾಗ ನೀನು ‘ಅದೆಲ್ಲ ನನಗೆ ಇಷ್ಟವಿಲ್ಲ, ನೀನು ನನ್ನನ್ನು ಎಷ್ಟು ಪ್ರೀತಿಸ್ತಿಯ ಹೇಳು’ ಅಂತ ಗಂಟು ಬಿದ್ದಿದ್ದೆ. ನಾನಾಗ ಸುಳ್ಳುಗಾರನಾಗಲೇ ಬೇಕಾಗಿತ್ತು, ಆದರೂ ಮಾತು ಮರೆಸಿ ಹಾಕಿದ್ದೆ ಅವತ್ತು ನಾನು. ನಿನಗೆ ನನ್ನ ಆಲೋಚನೆಗಳಲ್ಲಿ ಆಸಕ್ತಿಯಿಲ್ಲ ಅನ್ನಿಸಿತು, ಇಂತಹದ್ದನ್ನೆಲ್ಲಾ ಹೇಳಿಕೊಳ್ಳಲು ಆಕೆಯೇ ಸರಿ ಅನ್ನಿಸಿತು.
ಆಕೆಯೋ, ಪಾದರಸವೇ ಮೈತಾಳಿ ಬಂದ ಹುಡುಗಿ. ನಿನ್ನ ಮೆಚ್ಚಿನ ಗೆಳತಿ. ಹಾಗೆ ನೋಡಿದರೆ ಆಕೆ ಕ್ಲಾಸಿನ ಎಲ್ಲರಿಗೂ ಒಳ್ಳೆಯ ಗೆಳತಿಯೇ. ನಿನ್ನಷ್ಟು ಸುಂದರವಾಗಿಲ್ಲ ಆಕೆ. ಒಂದು ಸಲ ನೋಡಿದರೆ ಮತ್ತೆ ತಿರುಗಿ ನೋಡಬೇಕು ಅಂತ ಅನ್ನಿಸದ ರೂಪು. ಆದರೆ ಅದೊಂದೇ ಕಾರಣಕ್ಕೆ ಆಕೆಯನ್ನು ಇಷ್ಟ ಪಡದೆ ಇರಲು ಆಕೆಯೇನು ಷೋಕೇಸ್‍ನಲ್ಲಿಟ್ಟ ಬೊಂಬೆಯೇ? ಆಕೆಗೆ ನಿನಗಿಂತ ಮೃದುವಾದ ಮನಸ್ಸಿದೆ. ಎಲ್ಲರನ್ನೂ ಒಳಕ್ಕೆಳೆದುಕೊಳ್ಳುವಷ್ಟು ವಿಶಾಲವಾದ ಹೃದಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಯಲ್ಲಿ ನಿನಗಿರುವ ಅಂದದ ಬಗೆಗಿನ ಅಹಂಕಾರವಿಲ್ಲ. ಅದಕ್ಕೇ ನಾನು ನನ್ನ ತಿಕ್ಕಲು-ತಿಕ್ಕಲು ಆಲೋಚನೆಗಳನ್ನು, ದಿನಕ್ಕೊಂದರಂತೆ ಹುಟ್ಟುವ ಆದರೆ ಅಷ್ಟೇ ಬೇಗ ಸಾಯುವ ಅಲ್ಪಾಯುಷಿ ಕನಸುಗಳನ್ನು ಹಂಚಿಕೊಳ್ಳಲು ನಾನು ನಿನಗಿಂತ ಹೆಚ್ಚಾಗಿ ಆಕೆಯನ್ನೇ ಬಯಸುವುದು. ಆಕೆಯೂ ಅಷ್ಟೇ ಒಮ್ಮೆಯೂ, ‘ನಿನಗೆಷ್ಟು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ?’ , ‘ನೀನೇಕೆ ರೆಗ್ಯುಲರ್ ಆಗಿ ಶೇವ್ ಮಾಡೊಲ್ಲ?’, ‘ಆ ಸ್ಪೆಕ್ಟ್ಸ್ ತೆಗೆದು ಕಾಂಟ್ಯಾಕ್ಟ್ಸ್ ಹಾಕಿಕೊಳ್ಳಬಾರದಾ’, ‘ರೆಡ್ ಟೀ ಶರ್ಟ್ ನಿನಗೊಪ್ಪಲ್ಲ, ಹಾಕಿಕೊಳ್ಳಬೇಡ’ ಅಂತ ಹೇಳೋದೇ ಇಲ್ಲ. ಆಕೆ ಮನಸ್ಸಿನ ಬೇಗುದಿಗಳನ್ನು, ತನ್ನ ರೂಪಿನ ಬಗೆಗಿನ ಕೀಳರಿಮೆಯನ್ನು, ತನ್ನ ಭವಿಷ್ಯದ ಗುರಿಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾಳೆ. ನಾನೂ ಕೂಡ ಅಷ್ಟೇ, ನಿನಗೆ ಹೇಳಿದಂತೆ ಆಕೆಗೆ ‘ಅವನೊಂದಿಗೆ ಜಾಸ್ತಿ ಸಲಿಗೆಯಿಂದಿರಬೇಡ’, ‘ಹೆಚ್ಚು ಹಾಟ್ ಆಗಿ ಡ್ರೆಸ್ ಮಾಡ್ಕೋಬೇಡ’ ಅಂತೆಲ್ಲಾ ಹೇಳೋದಿಲ್ಲ. ಇಷ್ಟವಿಲ್ಲದಿದ್ದರೂ ಆಕೆಯ ಡ್ರೆಸ್‌ನ್ನು ‘ಓಹ್, ವಂಡರ್‌‍ಫುಲ್’ ಅಂತ ಹೊಗಳುವುದಿಲ್ಲ. ಆಕೆಯೊಡನಿರುವಾಗ ಒಂದು ಸಲವೂ ನನ್ನ ಕ್ರಾಪನ್ನು ತೀಡಿಕೊಳ್ಳಬೇಕು, ಇನ್‍ಶರ್ಟ್ ಸರಿ ಮಾಡಿಕೊಳ್ಳಬೇಕು ಅಂತ ಅನ್ನಿಸೋದಿಲ್ಲ ಗೊತ್ತಾ… ಆಕೆಯೊಂದಿಗೆ ಹಾಗೇ ಕತ್ತಲಾಗುವವರೆಗೂ ಕೂತಿರಬೇಕು ಅನ್ನಿಸೋದೇ ಇಲ್ಲ. ಆಕೆಯನ್ನು ಹೊಳೆಯ ದಂಡೆಯಲ್ಲಿ ಏಕಾಂತವಾಗಿ ಭೇಟಿಯಾಗಬೇಕು ಅಂತ ನಾನು ಆಲೋಚಿಸುವುದೇ ಇಲ್ಲ. ನನ್ನಾಣೆಗೂ ಹೇಳ್ತೀನಿ ಆಕೆಯನ್ನು ಪ್ರೀತಿಸುತ್ತಿದ್ದೀನಾ ಅಂತ ಒಂದೇ ಒಂದು ಬಾರಿಯೂ ನಾನು ಕೇಳಿಕೊಂಡಿಲ್ಲ.
ನೀನು ಅಸೂಯೆ ಪಡ್ತೀಯ ಅಂತ ಗೊತ್ತು ಆದರೂ ಹೇಳ್ತೀನಿ ಕೇಳು, ನನಗೆ ದಿನವೊಂದರಲ್ಲಿ ನಿನಗಿಂತ ಹೆಚ್ಚು ಬಾರಿ ಅವಳೇ ನೆನಪಾಗ್ತಾಳೆ. ಅವಳಿದ್ದಿದ್ರೆ ಈ ಸಿನೆಮಾ ಬಗ್ಗೆ ಏನಂತ ಮಾತಾಡ್ತಿದ್ದಳು, ಅವಳಿಗೆ ಈ ಪುಸ್ತಕ ಇಷ್ಟವಾಗ್ತಿತ್ತಾ ಅಂತ ಪದೇ ಪದೇ ಕೇಳಿಕೊಳ್ತಿದ್ದೆ. ಹಾಗೆ ಆಕೆಯ ನೆನಪಾದಾಗಲೆಲ್ಲಾ ಮಿಂಚಿನ ಹಿಂದೇ ಬರುವ ಗುಡುಗಿನ ಹಾಗೆ ನಿನ್ನ ನೆನಪಾಗುತ್ತದೆ. ನಿನ್ನ ಕಪಟವಿಲ್ಲದ ನಗೆ ನೆನಪಾಗುತ್ತೆ, ನನಗಾಗಿ ಅಂದು ಮಳೆಯಲ್ಲೇ ನೆನೆದು ಮನೆಯವರೆಗೂ ಬಂದು ಊಟ ಕೊಟ್ಟುಹೋದ ಘಟನೆ ನೆನಪಾಗುತ್ತೆ. ಆದರೆ ಮೊದಲೇ ಹೇಳಿದೆನಲ್ಲಾ, ಇವೆಲ್ಲಾ ಒಂದೇ ಕ್ಷಣ, ಮರುಘಳಿಗೆ ಟಿವಿಯಲ್ಲಿ ನೋಡಿದ ಅಧ್ಭುತವಾದ ಸಿನೆಮಾ, ರಸ್ತೆಯ ತಿರುವಲ್ಲಿ ಸಿಕ್ಕ ಹೈಸ್ಕೂಲ್ ಹುಡುಗಿ, ಆರ್ಕುಟ್ಟಿನಲ್ಲಿ ಅಕಸ್ಮಾತಾಗಿ ಭೇಟಿಯಾದ ಹಳೆಯ ಗೆಳತಿಯ ಚಿತ್ರ ಮನಸ್ಸನ್ನಾವರಿಸುತ್ತೆ. ಹೀಗಿರೋವಾಗ ನಿನ್ನ ನೆನಪು ನನ್ನ ಕಾಡುತಿದೆ ಅಂತ ಹೇಗೆ ಹೇಳಲಿ…
ಪತ್ರದ ಅಂತ್ಯ ಇನ್ನೂ ದೂರವಿದೆ,

ಇದೇನಾ ಸ್ನೇಹ…?

`ನೀನು ಗೆದ್ದಾಗ ಜಗತ್ತೇ ನಿನ್ನ ಬೆನ್ನು ತಟ್ಟುತ್ತಿರುತ್ತದೆ, ಹೆಗಲ ಮೇಲೆ ಹೊತ್ತುಕೊಂಡಿರುತ್ತೆ. ಆದರೆ ನೀನು ಸೋತು, ಜರ್ಜರಿತನಾಗಿದ್ದಾಗ ಆಸರೆಗಾಗಿ ಹೆಗಲು ಕೊಡುವುದಕ್ಕೆ ಉಳಿಯುವುದು ಒಬ್ಬನೇ ಒಬ್ಬ ಅವನೇ ನಿನ್ನ ಗೆಳೆಯ’ ಎಂಬ ಮೆಸೇಜು ನನ್ನ ಮೊಬೈಲ್‍ನ ಬುಟ್ಟಿಗೆ ಬಂದು ಬಿದ್ದಿತ್ತು. ಅದನ್ನು ಓದಿ ಕಣ್ಣು ಹೊರಳಿಸುವಷ್ಟರಲ್ಲಿ ಗೆಳೆತನದ ನವಿರು ನವಿರು ಅನುಭವದ ಅಸಂಖ್ಯ ನೆನಪುಗಳು ಮನಸ್ಸಿನ ಪರದೆಯ ಮೇಲೆ ಮೂಡಿ ನಿಂತವು.ನನ್ನ ಪ್ರಕಾರ ಮನುಷ್ಯ ಸಂಬಂಢಗಳಲ್ಲಿ ಅತ್ಯಂತ ಗಟ್ಟಿಯಾದದ್ದು, ನಿಸ್ಪೃಹವಾದದ್ದು ಸ್ನೇಹ. ತಾಯಿ ಮಗುವಿನ ಸಂಬಂಧದಲ್ಲಿರುವ ಮಮತೆ, ತ್ಯಾಗ, ಅವಲಂಬನೆ, ಗುರು ಶಿಷ್ಯರ ನಡುವಿನ ನಂಟಿನಲ್ಲಿರುವ ಮಾರ್ಗದರ್ಶನ, ಪ್ರೇರಣೆ, ಶರಣಾಗತಿ, ಪ್ರೇಮಿಗಳ ನಡುವಿರುವ ಆರ್ದ್ರತೆ, ಪೊಸೆಸಿವ್‍ನೆಸ್, ನಂಬಿಕೆಗಳೆಲ್ಲವನ್ನೂ ನಾವು ಗೆಳೆತನದ ಬಂಧದಲ್ಲಿ ಕಾಣಬಹುದು. ಅದೂ ರಕ್ತ ಸಂಬಂಧ, ಹಣದ ಲೇವಾದೇವಿ, ದೇಶ ಭಾಷೆಗಳ ಪರಿಧಿಯಿಲ್ಲದೆ.ಎಲ್ಲೋ ಹುಟ್ಟಿ, ತಮ್ಮ- ತಮ್ಮ ಸಂಸ್ಕಾರಗಳಲ್ಲಿ, ಪರಿಸರಗಳಲ್ಲಿ ಬೆಳೆದ ವಿಭಿನ್ನ ಸ್ವಭಾವದ ಇಬ್ಬರು ವ್ಯಕ್ತಿಗಳು ಹಾಗೆ ಯಾವ ಅಪೇಕ್ಷೆಯೂ ಇಲ್ಲದೆ ಒಬ್ಬರಿಗೊಬ್ಬರು ಬಂಧಿಸಲ್ಪಡುವ ಬಗೆಯನ್ನು ನೆನೆದು ನಾನು ಅದೆಷ್ಟೋ ಬಾರಿ ವಿಸ್ಮಯಗೊಂಡಿದ್ದೇನೆ. ಯಾವುದೇ ಕಲ್ಮಷಗಳಿಲ್ಲದ ಗೆಳೆತನವನ್ನು ನಾವು ಕಾಣಬೇಕಾದರೆ ಚಿಕ್ಕ ಮಕ್ಕಳನ್ನು ಗಮನಿಸಬೇಕು. ಮೇಲು ಕೀಳುಗಳೆಂಬ ಜಾತಿಯ ಚೌಕಟ್ಟಿಲ್ಲದೆ, ಬಡವ ಧನಿಕನೆಂಬ ಬೇಧಗಳನ್ನು ಮನಸ್ಸಿನಲ್ಲಿ ತಾರದೆ, ಹೆಣ್ಣು ಗಂಡು ಎಂಬ ಲಜ್ಜೆಯಿಲ್ಲದೆ ಮುಕ್ತವಾಗಿ ಯಾವ ಸ್ವಾರ್ಥವೂ ಇಲ್ಲದೆ ನಲಿಯುವ ಮಕ್ಕಳ ಸನ್ನಿಧಾನದಲ್ಲಿ ನಮಗೆ ಗೆಳೆತನದ ನಿಜವಾದ ಚಿತ್ರಣ ಸಿಕ್ಕೀತು.ಸ್ನೇಹವೆಂಬುದೂ ಪ್ರೀತಿಯ ಹಾಗೆ ಅಮೂರ್ತವಾದದ್ದು. ಅದಕ್ಕೆ ಗುಣ ಲಕ್ಷಣಗಳನ್ನು ಪಟ್ಟಿ ಮಾಡುತ್ತಾ ಕೂರುವುದು ಅಸಾಧ್ಯ. ಗೆಳೆತನದ ಯಾವ ಗುಣಲಕ್ಷಣವನ್ನೂ ಹೊಂದಿರದ ಸಂಬಂಧ ಕೂಡ ನಮ್ಮನ್ನು ತೀರಾ ಆಪ್ತವಾಗಿ ಆವರಿಸಬಹುದು ಇಲ್ಲವೇ ಶ್ರೇಷ್ಠವಾದ ಗೆಳೆತನ ಎಂದು ಗುರುತಿಸಿದ ಸ್ನೇಹದಲ್ಲಿ ಯಾವಾಗ ಬೇಕಾದರೂ ಬಿರುಕುಂಟಾಗಬಹುದು. ಯಾವುದು ಗೆಳೆತನ, ಯಾವುದು ಗೆಳೆತನವಲ್ಲ, ಯಾರು ನಿಜವಾದ ಗೆಳೆಯ, ಯಾರು ಸಮಯ ಸಾಧಕ ಅಂತ ವರ್ಗೀಕರಿಸುವುದು ಅಸಾಧ್ಯ. ಒಂದೊಮ್ಮೆ ಕೇವಲ ಆವಶ್ಯಕತೆಗಳಿಗಾಗಿ ಸ್ಥಾಪಿತವಾದ ಸಂಬಂಧ ಮುಂದೊಂದು ದಿನ ಬಿಟ್ಟಿರಲಾರದ ಬಂಧವಾಗಿ ರೂಪುಗೊಳ್ಳಬಹುದು. ಎಂದೋ ಕ್ಲಾಸಿನಲ್ಲಿ ನೋಟ್ಸ್ ಕೇಳಿದ ಸಹಪಾಠಿ ಜೀವ ಗೆಳೆಯನಾಗಿ ಬೆಳೆಯಬಹುದು. ಚಿಕ್ಕಂದಿನಿಂದ ಇದ್ದ ಸ್ನೇಹದ ಬಂಧ ಬೆಳೆಬೆಳೆಯುತ್ತ ಸಡಿಲವಾಗಿ ಸಂಬಂಧ ಮುರುಟಿಹೋಗಿಬಿಡಬಹುದು. ಒಟ್ಟಿನಲ್ಲಿ ಸ್ನೇಹವೆಂಬುದು ಒಂದು ಅಮೂರ್ತ ಪ್ರಕ್ರಿಯೆ. ಅದರ ಹುಟ್ಟು, ಅಂತ್ಯಗಳು ಗುರುತಿಸಿ ನೋಡಲಾಗದಷ್ಟು ಸಂಕೀರ್ಣ.ನಾನು ಬೆಳೆದ ಮನೆಯ ಪರಿಸರದಿಂದಲೋ ಇಲ್ಲವೇ ನನ್ನ ಒಳಮುಚ್ಚುಗ ಸ್ವಭಾವದಿಂದಲೋ ನನಗೆ ಚಿಕ್ಕಂದಿನಲ್ಲಿ ಅಷ್ಟಾಗಿ ಗೆಳೆಯರ ಗುಂಪು ಇರಲಿಲ್ಲ.ಆದರೂ ಮನೆಯ ಅಕ್ಕಪಕ್ಕದ ಹುಡುಗ-ಹುಡುಗಿಯರೊಂದಿಗೆ ಕೂಡಿ ಆಡಿದ ಆಟಗಳ, ನಲಿದ ಕ್ಷಣಗಳ ನೆನಪು ಮಾಸಿಲ್ಲ. ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ಒಂದು ಸ್ಲಂ ಇದ್ದದ್ದರಿಂದ ಮನೆಯಿಂದ ಹೊರಗೆ ಹೋಗಿ ಆಡುವುದು ನಮಗೆ ನಿಷಿದ್ಧವಾಗಿತ್ತು. ಹಾಗಾಗಿ ಮನೆಯ ಸುತ್ತ ಮುತ್ತ ಸಿಗುತ್ತಿದ್ದ ನಮ್ಮದೇ ವಯಸ್ಸಿನ ಗೆಳೆಯ-ಗೆಳತಿಯರೇ ನಮ್ಮ ಆಸ್ತಿ. ಆಟವಾಡಲು ನಮ್ಮ ಗುಂಪು ನೆರೆದಾಗಲೆಲ್ಲಾ ಯಾವ ಆಟ ಆಡುವುದು ಎಂಬ ಸಮಸ್ಯೆ ಎದ್ದು ನಿಲ್ಲುತ್ತಿತ್ತು. ನಮ್ಮ ಗುಂಪಿನಲ್ಲಿ ಒಂದಿಬ್ಬರು ಉಡುಗಿಯರಿದ್ದರೆ ಅಡುಗೆ ಆಟ, ಟೀಚರ್ ಆಟ ಅಂತ ತೀರ್ಮಾನವಾಗುತ್ತತ್ತು. ಇಲ್ಲದಿದ್ದರೆ ಐಸ್‍ಪೈಸ್, ಬುಗುರಿ, ಗೋಲಿ ಆಡುತ್ತಿದ್ದೆವು. ಚಿನ್ನಿ ದಾಂಡು ಸಭ್ಯರ ಆಟವಲ್ಲ ಎಂದು ನಂಬಿದ್ದರಿಂದ ಅದನ್ನು ಆಡುತ್ತಿರಲಿಲ್ಲ. ರಸ್ತೆಯಲ್ಲಿ ಕೆಲವು ಸ್ಲಮ್ಮಿನಹುಡುಗರು ಓಡಾಡಿದರೆ ಸಾಕು ನಾವು ಆಟ ನಿಲ್ಲಿಸಿ ಮನೆಯೊಳಕ್ಕೆ ಬಂದು ಬಿಡುತ್ತಿದ್ದೆವು.ಅವರು ನಿಮ್ಮ ಅಂಗಿ-ಚಡ್ಡಿ, ಬುಗುರಿಗಳನ್ನು ಕಿತ್ತುಕೊಂಡು ಹೋಗುತ್ತಾರೆ ಅಂತ ಮನೆಯಲ್ಲಿ ಹಿರಿಯರು ಸುಮ್-ಸುಮ್ಮನೇ ಹೆದರಿಸಿದ್ದರಿಂದ ಆ ಎಚ್ಚರಿಕೆ. ಆ ಹುಡುಗರು ಗುಂಪಾಗಿ ರಸ್ತೆಯಲ್ಲಿ ನಡೆದು ಬರುತ್ತಿದ್ದರಂತೂ ಮನ್ಎಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡು ಅವರ ಗುಂಪು ದೂರ ಹೋಗುವವರೆಗೂ ಕಿಟಕಿಯಲ್ಲಿ ಇಣಕಿ ನೋಡುತ್ತಾ ಕುಳಿತಿರುತ್ತಿದ್ದೆವು.ದೀಪಾವಳಿಯ ಸಂಭ್ರಮದಲ್ಲಿ ಒಂದು ವಿಚಿತ್ರವಾದ ಸಂಗತಿ ನಡೆಯುತ್ತಿತ್ತು. ಯಾರ ಮನೆಯಲ್ಲ್ಲಿ ಹೆಚ್ಚು ಪಟಾಕಿ ತಂದಿರುತ್ತಾರೋ ಅವನಿಗೆ ಹೆಚ್ಚೆಚ್ಚು ಗೆಳೆಯರು ಹುಟ್ಟಿಕೊಳ್ಳುತ್ತಿದ್ದರು. ಆತ ಎಡಗೈಲಿ ಊದಿನ ಕಡ್ಡಿ ಬಲಗೈಲಿ ಪಟಾಕಿಯ ಡಬ್ಬಿ ಹಿಡಿದು ಹೊರಬಂದರೆ, ಅವನ ಪಟಾಕಿಯ ಮದ್ದ್ ಕಿತ್ತುಕೊಡುವುದಕ್ಕೆ, ಎರಡೆರಡನ್ನು ಜೋಡಿ ಮಾಡಿ ಹಚ್ಚು, ಆ ನಾಯಿ ಕಾಲ ಹತ್ತಿರ ಹಚ್ಚು, ಈ ಡಬ್ಬಿಯೊಳಗೆ ಇಟ್ಟು ಹಚ್ಚು ಅಂತ ಉಪದೇಶ ಕೊಡುತ್ತಾ ಅಲೆಯುವವರ ಗುಂಪು ನೆರೆದುಬಿಡುತ್ತಿತ್ತು. ಮಧ್ಯೆ ಮಧ್ಯೆ ಅವರು ಅವನ ಪಟಾಕಿಯ ಪಟ್ಟಣದಿಂದ ಒಂದುರೆಡು ಪಟಾಕಿ ತೆಗೆದು ಜೇಬಿಗೆ ಹಾಕಿಕೊಂಡು ಬಿಡುತ್ತಿದ್ದರು. ನನಗೆ ಇಂತಹ ‘ಸಮಯ ಸಾಧಕ’ ಗೆಳೆಯರನ್ನುಕಂಡರೆ ಆಗುತ್ತಿರಲಿಲ್ಲ ಆದರೂ ಹೆಚ್ಚೆಚ್ಚು ಮಂದಿ ನನ್ನ ನೆರೆದಷ್ಟೂ ನನ್ನ ಅಹಂ ಉಬ್ಬಿ ಉಬ್ಬಿ ಆಕಾಶದೆತ್ತರಕ್ಕೆ ವ್ಯಾಪಿಸುತ್ತಿತ್ತು.ಹೀಗೆ ನಾವು ದೀಪಾವಳಿಯ ದಿನ ಹೊಚ್ಚ ಹೊಸ ಬಟ್ಟೆಯನ್ನು ತೊಟ್ಟುಕೊಂಡು ಪಟಾಕಿ ಹಚ್ಚಲು ಅಣಿಯಾಗುತ್ತಿದ್ದರೆ, ಅತ್ತ, ಹಿಂದಣ ರಸ್ತೆಯ ಸ್ಲಮ್ಮಿನ ಮಕ್ಕಳು ಮೊದಲ ಪಟಾಕಿಯ ಸದ್ದಿಗೆ ಕಾದು ಕುಳಿತಿದ್ದವರಂತೆ ಚಂಗನೆ ಹಾರಿ ನಮ್ಮ ಮನೆಯ ಬೀದಿಗೆ ಬಂದು ಬಿಡುತ್ತಿದ್ದರು. ಅವರೇ ನಮ್ಮ ಬಳಿ ಬರಲು ಹೆದರುತ್ತಿದ್ದರೋ ಅಥವಾ ನಾವೇ ಅವರನ್ನು ಬಳಿಗೆ ಬರಲು ಬಿಡುತ್ತಿರಲಿಲ್ಲವೋ, ಒಟ್ಟಿನಲ್ಲಿ ಅವರು ಬೀದಿಯಲ್ಲಿ ನಮ್ಮ ಮನೆಗಳಿಂದ ಮಾರು ದೂರದಲ್ಲಿ ನಿಂತು ನಾವು ಪಟಾಕಿ ಹಚ್ಚುವುದನ್ನು ಕುತೂಹಲದ ಕಣ್ಣುಗಳಿಂದ ಕುಳಿತು ನೋಡುತ್ತಿದ್ದರು. ನಾವು ಪಟಾಕಿಯ ಮದ್ದಿಗೆ ಬೆಂಕಿ ಕೊಡುವಾಗ ಅವರೇ ಬೆಂಕಿಕೊಡುವವರಂತೆ ರೋಮಾಂಚಿತರಾಗುತ್ತಿದ್ದರು, ಪಟಾಕಿಯ ಮದ್ದಿಗೆ ಅಂಟಿಕೊಂಡ ಕಿಚ್ಚು ಸಾಲಲ್ಲಿ ಸಾಗುವ ಇರುವೆಯಂತೆ ಪಟಾಕಿಯ ಹೊಟ್ಟೆಯ ಬಳಿಗೆ ಸಾಗುತ್ತಿದ್ದಷ್ಟು ಹೊತ್ತು ಅವರ ಕಣ್ಣುಗಳಿಂದ ಮುಂದೇನಾಗುವುದೋ ಎಂಬ ಕಾತರ ತುಳುಕುತ್ತಿರುತ್ತಿತ್ತು. ಒಂದು ಸಲ ಕಿಚ್ಚು ಪಟಾಕಿಯ ಹೊಟ್ಟೆಗೆ ನುಗ್ಗಿ ಅದು ಎಣ್ಣೆಯಲ್ಲಿ ಬಿದ್ದ ಪೂರಿಯಂತೆ ಮೈ ಉಬ್ಬಿಸಿಕೊಂಳ್ಳುತ್ತಾ ಹೋದಂತೆಲ್ಲಾ ಅವರ ಕಣ್ಣುಗಳಲ್ಲಿನ ಕಾತರ ಹೆಚ್ಚುತ್ತಿರುತ್ತಿತ್ತು. ಒಮ್ಮೆಗೇ ಅದು ‘ಢಂ’ ಎಂದು ಸಿಡಿದು ಚೂರಾದರೆ ಅವರ ಕಣ್ಣುಗಳಲ್ಲಿ ಸಂಭ್ರಮ ಕುಣಿಯುತ್ತಿರುತ್ತಿತ್ತು. ಅದು ಸಿಡಿಯದೆ ಟುಸ್ಸೆಂದರೆ ನಮ್ಮ ಕಡೆಗೊಮ್ಮೆ ನೋಡಿ ಮುಸಿ-ಮುಸಿ ನಗುತ್ತಿದ್ದರು. ನಾವು ಅತ್ತಿತ್ತ ನೋಡುವಷ್ಟರಲ್ಲಿ ಓಡಿ ಹೋಗಿ ಬಾಗಿ ಸಿಡಿಯದ ಪಟಾಕಿಯನ್ನು ಜೇಬಲ್ಲಿ ಹಾಕಿಕೊಂಡು ಓಡಿಬಿಡುತ್ತಿದ್ದರು. ಅವರು ಹಾಗೆ ಅದನ್ನು ‘ಕದ್ದೊ’ಯ್ಯುವುದನ್ನು ಕಂಡು ನಮ್ಮ ಮೈಯುರಿಯುತ್ತಿತ್ತು. ಓಡಿ ಹಿಡಿಯೋಣ ಅಂದರೆ ನಮಗೆ ಅವರ ಸಮನಾದ ವೇಗದಲ್ಲಿ ಓಡುವ ನಮ್ಮ ಸಾಮರ್ಥ್ಯದ ಬಗ್ಗೆಯೇ ವಿಶ್ವಾಸವಿರಲಿಲ್ಲ. ಮೇಲಾಗಿ ಅವರು ತಿರುಗಿ ನಿಂತುಬಿಟ್ಟರೆ ಎಂಬ ಭಯ ಬೇರೆ. ಆಗ ನನ್ನ ಸುತ್ತ ಇರುತ್ತಿದ್ದ ಗೆಳೆಯರು, ‘ಮರ್ಯಾದೆ ಇಲ್ಲದೋರು’ ಎಂದು ತಮ್ಮ ಅಸಮಧಾನ ಸೂಚಿಸುತ್ತಿದ್ದರು. ಒಮ್ಮೆ ಹೀಗೆ ಒಬ್ಬ ನನ್ನ ವಯಸ್ಸಿನವನೇ ಆದ ಹುಡುಗ ಸಿಡಿಯದ ಪಟಾಕಿಯೊಂದನ್ನು ಚಡ್ಡಿಯ ಜೇಬಲ್ಲಿ ಹಾಕಿಕೊಂಡು ಓಡುವಾಗ ಅದು ಸಿಡಿದು ಬಿಟ್ಟಿತು. ಆತನಿಗಾದ ಗಾಬರಿ, ಭಯ, ದುಃಖವನ್ನು ಕಂಡು ನನ್ನನ್ನೂ ಸೇರಿದಂತೆ ನನ್ನ ಗೆಳೆಯರಿಗೆ ತಡೆಯಲಾರದ ನಗು ಬಂದಿತ್ತು. ‘ತಕ್ಕ ಶಾಸ್ತಿಯಾಯ್ತು’ ಅಂತಲೇ ನಮಗೆಲ್ಲಾ ಅನ್ನಿಸಿತು. ಅವನ ಸುಟ್ಟು - ಹರಿದ ಚಡ್ಡಿ ನಮಗೆ ಅಪಹಾಸ್ಯದ ವಸ್ತುವಾಯಿತೇ ವಿನಃ ಅನುಕಂಪಕ್ಕೆ ಆಸ್ಪದವಾಗಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ನನ್ನಪ್ಪ, ನಮ್ಮನ್ನು ಗದರಿಸಲಿಲ್ಲ ಬದಲಾಗಿ ಆ ಹುಡುಗನನ್ನು ಬಳಿಗೆ ಕರೆದರು. ಆತ ಏನಾಗುವುದೋ ಎಂಬ ಆತಂಕದಲ್ಲಿಯೇ ಅಪ್ಪನ ಬಳಿಗೆ ಹೋದ. ಅಪ್ಪ ಅವನ ಸುಟ್ಟ ತೊಡೆಗೆ ಬರ್ನಾಲ್ ಹಚ್ಚಿ, ನನ್ನ ಪಟಾಕಿಯ ಡಬ್ಬಿಯಿಂದ ಕೊಂಚ ಪಟಾಕಿ ತೆಗೆದು ಆತನ ಕೈಗಿಟ್ಟು ಕಳುಹಿಸಿದರು. ನನಗೆ ಅಪ್ಪನ ವರ್ತನೆಯನ್ನು ಕಂದು ಮೈಯುರಿದುಹೋಯ್ತು. ಯಾವನೋ ಬೀದಿ ದಾಸಯ್ಯನಿಗೆ ನನ್ನ ಪಟಾಕಿ ಕೊಟ್ಟರಲ್ಲಾ ಅಂತ ಕೋಪ ಬಂದಿತು. ಆದರೂ ಏನೂ ಮಾಡಲಾಗದೆ ಸುಮ್ಮನೆ ನಿಂತಿದ್ದೆ.ಅಪ್ಪನಿಂದ ಪಟಾಕಿ ಪಡೆದ ಆ ಹುಡುಗನನ್ನು ನಾನು ಅಸೂಯೆ, ಅಸಹ್ಯ ಬೆರೆತ ಕಣ್ಣುಗಳಿಂದಲೇ ನೋಡುತ್ತಿದ್ದೆ. ನನ್ನ ಸುತ್ತ ಇದ್ದ ಗೆಳೆರಲ್ಲಂತೂ ಅಸೂಯೆ ನೂರ್ಮಡಿಯಾಗಿತ್ತು. ಆ ಪಟಾಕಿಯನ್ನು ನಮಗಾದರೂ ಕೊಟ್ಟಿದ್ದರೆ ಒಂದು ಅರ್ಥವಿರುತ್ತಿತ್ತು ಎನ್ನುವ ವಾದ ಅವರ ಮುಖಭಾವದಲ್ಲಿತ್ತು. ಆ ಹುಡುಗ ಬಳಿಯಲ್ಲೇ ಇದ್ದ ಊದಿನ ಬತ್ತಿ ತೆಗೆದುಕೊಂಡು ಒಂದೆರೆಡು ಪಟಾಕಿಯನ್ನು ಹಚ್ಚಿ ಸಂಭ್ರಮಿಸಿದ. ಕೊನೆಗುಳಿದ ಅರ್ಧದಷ್ಟು ಪಟಾಕಿಯನ್ನು ಎರಡು ಭಾಗ ಮಾಡಿ ಒಂದನ್ನು ತನ್ನ ಚಡ್ಡಿಯ ಇನ್ನೊಂದು ಜೇಬಿನಲ್ಲಿ ತುರುಕಿಕೊಂಡು ಮತ್ತೊಂದು ಭಾಗವನ್ನು ಹಾಗೇ ಕೈಲಿ ಹಿಡಿದುಕೊಂಡ. ಅದನ್ನೇನು ಮಾಡುತ್ತಾನೋ ಅಂತ ನಾವೆಲ್ಲಾ ಕುತೂಹಲದಿಂದ ಎದುರು ನೋಡುತ್ತಿದ್ದೆವು. ಆ ಪಟಾಕಿಗಳನ್ನು ಕೈಲಿ ಹಿಡಿದುಕೊಂಡು ಆತ ನೇರವಾಗಿ ನನ್ನ ದಿಕ್ಕಿನಲ್ಲೇ ಬರಲಾರಂಭಿಸಿದ. ಏನು ಮಾಡುವನೋ ಎನ್ನುವ ಕಾತರದಿಂದ ನನ್ನ ಎದೆಬಡಿತ ಹೆಚ್ಚಾಗುತ್ತಿತ್ತು. ಆತ ನನ್ನ ಬಳಿ ಬಂದವನೇ ಆ ಪಟಾಕಿಗಳನ್ನು ನನ್ನ ಕೈಗೆ ಕೊಟ್ಟು ತನ್ನ ಮಸಿಯಾದ ಹಲ್ಲುಗಳನ್ನು ತೋರಿ ನಗುತ್ತಾ ‘ಥ್ಯಾಂಕ್ಸ್’ ಅಂತ ಹೇಳಿ ಓಡಿ ಹೋಗಿ ತನ್ನ ಗೆಳೆಯರನ್ನು ಸೇರಿಕೊಂಡ. ನಾನು ಮೂಖ ವಿಸ್ಮಿತನಾಗಿ ನೋಡುತ್ತಲೇ ಇದ್ದೆ. ತನ್ನ ಗೆಳೆಯರ ಗುಂಪನ್ನು ಸೇರಿದ ಆತ ತನ್ನ ಜೇಬಲ್ಲಿದ್ದ ಪಟಾಕಿಗಳನ್ನು ತೆಗೆದು ಅವನ್ನೆಲ್ಲಾ ತನ್ನ ಗೆಳೆಯರಿಗೆ ಹಂಚಿಬಿಟ್ಟ. ನಾನು ನೋಡುತ್ತಲೇ ಇದ್ದೆ.ನನ್ನ ಗೆಳೆಯರಲ್ಲೊಬ್ಬ, ‘ನೋಡು ಅವನಿಗೆಷ್ಟು ಧಿಮಾಕು, ನಿನ್ನ ಪಟಾಕಿಯನ್ನು ನಿನಗೇ ಕೊಟ್ಟು ದೊಡ್ಡ ಉಪಕಾರ ಮಾಡಿದೋನಂಗೆ ಹೋಗ್ತಾ ಇದ್ದಾನೆ’ ಅಂದ.ಇನ್ನೊಬ್ಬ, ‘ಅಂತವರಿಗೆ ನಾಚಿಕೆ ಇರೊಲ್ಲ. ಅದ್ಕೆ ಅವರ್ಜೊತೆ ಸೇರ್ಬೇಡ ಅಂತ ನಮ್ಮ ಹೇಳೋದು’ ಅಂದ. ಅವರ ಮಾತುಗಳು ನನ್ನ ಕಿವಿಯೊಳಕ್ಕೆ ಇಳಿಯುತ್ತಲೇ ಇರಲಿಲ್ಲ. ನನ್ನ ಕಣ್ಣು-ಮನಸ್ಸಿನ ತುಂಬ ಆ ಹುಡುಗನ ಮುಖದ ಮೇಲಿದ್ದ ಸಂಭ್ರಮ, ವಿನಂತಿ, ಕೃತಜ್ಞತೆ, ನಾನು ನಿನ್ನವನು ಎಂಬ ಆಸರೆಯೇ ಕವಿದಿತ್ತು.ಗೆಳೆತನ ಎಂದರೇನೆಂಬ ಅನುಭವ ನನಗಾಗಿತ್ತು.
.

Saturday, February 16, 2008

ನಾಗು ಅವರ ಹೃದಯದ ಹಾಡು




ಯಾಕೋ ಬೇಸರವೆನಿಸಿದೆ……. ನನಗಲ್ಲ
ನಿನ್ನ ಹೆಸರ ಕೂಗಿ ಕರೆಯದನನ್ನ ಬಾಯಿಗೆ…
ನೀನಾಡೋ ಮಾತುಗಳ ಕೇಳದನನ್ನ ಕಿವಿಗಳಿಗೆ…
ನಿನ್ನ ಮುಂಗುರುಳ ನೇವರಿಸದನನ್ನ ಬೆರೆಳುಗಳಿಗೆ…
ನಿನ್ನನ್ನು ತೋಳುಗಳಲಿ ಸೇರಿಸಿಕೊಳ್ಳದಈ ತಬ್ಬಲಿ ಕೈಗಳಿಗೆ…
ಎಲ್ಲಕ್ಕಿಂತ ಮಿಗಿಲಾಗಿನಿನ್ನನ್ನು ಕನಸಲ್ಲೂ ಕಾಣದಪಾಪಿ ಕಣ್ಣುಗಳಿಗೆ…
ಅರ್ಥವಾಗದೆ ನಿನಗೆ… ನಿನ್ನ ಮನಸಿಗೆ…ಹೃದಯದ ನೋವು….

----------------------------------------------------------------------

ರೆಪ್ಪೆಗಳ ತಪ್ಪಿಲ್ಲ….

ರೆಪ್ಪೆಗಳ ತೆರೆದೊಡನೆ
ಕಣ್ಣುಗಳುಅವಳನ್ನೇ ಹುಡುಕುತವೆ….….
ಮುಚ್ಚಿದರೂ ಭಾರವೆ
ಅಲ್ಲೂ ಅವಳ ಕನಸನ್ನೇ
ಕಂಡಿವೆಕಂಗಳನ್ನು ಕಿತ್ತಿಡಲೇ…
ಅಷ್ಟೊಂದು ಕೋಪವಿಲ್ಲ!!
ಕಾಣಲಿ ಅವಳ ನಲಿವನ್ನಾದರೂ
ನನ್ನಲ್ಲಿ ನಲಿವಿನ ಸುಳಿವೆ ಇಲ್ಲ…. ~ನಾಗು….
-----------------------------------------------------------------

ಗೆಳೆಯಾ ನಾಗುರವರ್ ಹೃದಯಾಲದ ಮಾತುಗಳು ..


ಹೃದಯದ ಬಡಿತ…
ಮನದ ಮಿಡಿತ…
ಪ್ರತಿ ಕ್ಷಣವೂ
ನಿನ್ನ ಕಾಣುವ ತುಡಿತ…
ಪ್ರಿಯಾ… ನನ್ನೆ ನಾ ಮರೆತೆ
ನಿನ್ನ ನೆನೆ ನೆನೆಯುತಾ….
~ನಾಗು
______________________________________________________--

ಗೊತ್ತಿಲ್ಲದ ಗೆಳೆಯ ಗೆಳತಿಯರೆ….
ನಂಗೊತ್ತು…. ನಿಮಗೂ ಗೊತ್ತು: “ಮನಸು - ಕನಸು” ಇಲ್ದೇ ನೀವು, ನಾನು, ಯಾರೂ ಇಲ್ಲ, ಮತ್ತು ಇರಕ್ಕಾಗಲ್ಲ.!
ಏನಂತೀರಿ….?
ನಿಮ್ಮ ಮನಸಿಗೆ ಇಷ್ಟ ಆಗೋ ಎಷ್ಟೋ ವಿಷಯಗಳು ಈ ಭೂಮಿ ಮೆಲೆ ಇವೆ , ಇರಲಿ.
ಆ ಎಷ್ಟೋ ವಿಷಯಗಳಲ್ಲಿ ಇದು ಅಂದ್ರೆ ಈ Blog ಕೂಡ ಇರಲಿ, ಇದೊಂದು ಸವಿನಯ ಕೋರಿಕೆ.
ನಿಮಗೆ ಮನಸಿದೆ ಅಂದ ಮೇಲೆ ಕನಸು ಇರುತ್ತೆ ಅಲ್ವಾ….
ಆ ಕನಸಲ್ಲಿ ನಿಮ್ಮ ಹುಡುಗಿನೋ/ಹುಡುಗಾನೋ…. ಬರುತ್ತಾರೆ, ಬಂದು ಕಾಟ ಕೊಡ್ತಾರೆ ತಾನೆ, ಕೊಡ್ಲೇ ಬೇಕು ಬಿಡಿ.
ಕೊಡ್ಲಿಲ್ಲ ಅಂದ್ರೆ ಅವರ ಮನಸಿಗೆ ಸಮಾಧಾನ ಎಲ್ಲಿಂದ ಸಿಗ್ಬೇಕು….!!!?
ಆ ರೀತಿ ಕಾಟ ಕೊಟ್ಟವರ ಬಗ್ಗೆ, ಅಥವಾ ಆ ಕಾಟದ ಬಗ್ಗೆ ಕಾಟಾಚಾರವಾಗಿ ಬರೆಯದೆ ಮನಸಿಟ್ಟು ಬರೆದು ಈ Blogಗೆ Post ಮಾಡಬಹುದು….ಮಾಡಿ….
ನನಗೆ ಬೇಜಾನ್ ಬೆಡಗಿಯರು ಕಾಡ್ತಾರೆ…. ಯಾವ್ ಪಾಟಿ ಕಾಡ್ತಾರೆ ಅಂದ್ರೆ ಅವರ ಕಾಟ ತಾಳಲಾರದೆ ಈ Blog ಎಂಬ ಪುಟ್ಟ ಗೂಡಿಗೆ ಬಂದು ಸೇರಿಕೊಂಡು ಬಿಟ್ಟಿದಿನಿ…
ನೀವು ನನ್ನ ಹಾಗೆನೆ ಶ್ಯಾನೆ ಕಷ್ಟಪಟ್ಟಿದ್ರೆ ಮುಲಾಜಿಲ್ಲದೆ ಈ ಮನಸಿನ ಗೂಡಿಗೆ ಒಂದು ಮುದ್ದಿನ “ಗುಬ್ಬಿ” ಆಗಿಬಿಡಿ….
ಈ ಗೂಡು ನಿಮಗಾಗಿ ಸದಾ ತೆರೆದ ಬಾಗಿಲನಲ್ಲಿ ಕಾಯುತ್ತಿರುತ್ತದೆ….
—–ನಾಗ….{ಒಳ್ಳೆ ಹುಡುಗ….. ನಿಮ್ಮ ತರಾನೆ…!!!!}

ತಪ್ಪು ಮಾಡಿದೆ… ರೆಪ್ಪೆ ತೋಯ್ದಿದೆ…!!


ತಪ್ಪೇ ಮಾಡದೇ ಹೋದರೇ…ರೆಪ್ಪೆ ತೋಯದೇ ಹೋದರೆ..ಪ್ರೀತಿ ಎಂಬುದು ಎಲ್ಲಿದೆ…?..…….ಪ್ರಿಯಾ… ಹೇಗಿವೇ ಈ ಸಾಲುಗಳು..? ನಿಜಕ್ಕೂ ನಾ ಬರೆದದ್ದಲ್ಲ.. ಕವಿ..ಕಲ್ಯಾಣ್ ಬರೆದದ್ದು!!ಹೇಗಿವೇ..? ನಿಂಗೇನಾದ್ರೂ ಅರ್ಥ ಆಯ್ತಾ? ಅರ್ಥ ಆದ್ರೆ ಸಂತೋಷ.. ಆಗಲಿಲ್ಲ ಅಂದ್ರೂ.. ಸಂತೋಷಾನೇ..! ಯಾಕ್‍ಹೀಗೆ ಅಂತೀಯಾ… ನಾ ಅರ್ಥ ಮಾಡಿಸಬಹುದಲ್ಲ ಅಂಥ!! ಇರಲಿ ಬಿಡು..ಮತ್ತೆ ಯಾಕ್ ಪತ್ರ ಬರೀತಾ ಇದೀನಿ ಗೊತ್ತಾ…?ಮೇಲೆ ಇದಾವಲ್ಲ ಸಾಲುಗಳು .. ಅವು ತುಂಬಾ ಕಾಡ್ಬಿಟ್ವು ಕಣೇ.. ಅದಕ್ಕೆ!!ನಾನ್ ಆ ತಪ್ಪು ಮಾಡಿದಿನಿ.. ರೆಪ್ಪೆಗಳನ್ನು ಕೂಡ ತೋಯಿಸಿದಿನಿ.. ಆದ್ರೆ ನೀನ್ ಇನ್ನಾ .. ತಪ್ಪು ಮಾಡಿಲ್ಲ… i mean ಪ್ರೀತಿ ಮಾಡಿಲ್ಲ..(ಅಥವಾ ಅದು ಹುಟ್ಟಲೇ ಇಲ್ಲ…!!) ರೆಪ್ಪೆಗಳನ್ನ ಮಾತ್ರ ತೋಯಿಸಿದ್ದೀಯಾ.. ಆದ್ರೆ ನಿನ್ನದಲ್ಲ… ನನ್ನದು.. thanks for that ಕಣೇ!!ಜಗತ್ತಲ್ಲಿ ತಪ್ಪು ಮಾಡಿ ಕೂಡ.. ಸಂತೋಷವಾಗಿ ಇರೋವರು ಅಂದ್ರೆ ಪ್ರೇಮಿಗಳು ಮಾತ್ರ ಅನ್ಸುತ್ತೆ!! ಹ್ಹ…ಹ್ಹ… Again ಅವರಲ್ಲಿ..ನಾನೂ ಒಬ್ಬ!!ಪ್ರಿಯಾ.. ಒಂದ್ ಸತ್ಯ ಹೇಳಲಾ…? ನೀನ್ ಬ್ಯಾಡಾ ಅಂದ್ರೂ ಹೇಳ್ತೀನಿ ಕೇಳು..ನಿನಗಿಂತ ನಿನ್ ಹೆಸರನ್ನ ಜಾಸ್ತಿ .. ತುಂಬಾನೇ ಜಾಸ್ತಿ ಪ್ರೀತಿಸ್ತೀನಿ ಕಣೆ!, ನೀನು ನಾ ಕರೆದೊಡನೆ..ಬರೋದಿಲ್ಲ..ಆದ್ರೆ ನಿನ್ ಹೆಸರು.. ಹೂಂ.. ನಿಜವಾಗ್ಲೂ ಕರೆದ ತಕ್ಷಣ ಬರುತ್ತೆ.. ನನ್ನೊಳಗಿಂದ..ನನ್ನ ಮನದೊಳಗಿಂದ..!! ನನ್ನ ನಿನ್ನ ತುಟಿಗಳೆರೆಡು “ಭೇಟಿ” ಆಗೋದೇ ಇಲ್ಲ.. ಆದ್ರೆ ನಿನ್ನ ಹೆಸರ ಆರಂಭದ ಅಕ್ಷರ ಕರೆದೊಡನೆಯೇ.. ನನ್ನವೇ ಎರಡು ತುಟಿಗಳು ಎಷ್ಟು ಜಲ್ದಿ ಒಂದಾಗ್ತವೇ ಗೊತ್ತಾ..? ಬೇಕಿದ್ರೆ ನಿನ್ನ ಹೆಸರನ್ನ ನೀನೆ ಕರೆದುಕೊಂಡು ನೋಡು.. thatz y, i luv ur Name more than u…!! Sorry ನಿನ್ನ ಹೆಸರನ್ನೇ ನಿನ್ನ ಸವತಿಯನ್ನಾಗಿ ಮಾಡಿದ್ದಕ್ಕೆ!ಇನ್ನು ಒಬ್ರು ಸವತಿ ಇದಾರೆ..!! ಅವರು ಯಾರು ಗೊತ್ತಾ… ??? ಅದು ಕೂಡಾ ನಿನ್ನದೇ ಕಣೇ… ಗೊತ್ತಾಗಲಿಲ್ವಾ…? ಅವೇ ನಿನ್ನ “ನೆನಪುಗಳು…”ನಿಜವಾಗ್ಲೂ ಅವುಗಳು ಕೂಡ.. ನಿನಗಿಂತ ಎಷ್ಟೋ ವಾಸಿ.. ನೋಡು.. ನಿನ್ನನ್ನ ನಾ ಎಷ್ಟು ಗೋಗರೆದು ಕರೆದರೂ ನೀ ಬರೋಲ್ಲ.. ಆದ್ರೆ ನಿನ್ನ ನೆನಪುಗಳನ್ನ ನಾ ಕರೆಯೋದೇ ಬೇಡ.. ತಾವಾಗಿಯೇ.. ಮನದ ನೆಲದಲಿ ಮುತ್ತಿಡಲು ಬರುತ್ತವೆ.. ಮಳೆ ಹನಿಗಳು ಈ ಇಳೆಯ ಚುಂಬಿಸೋ ಹಾಗೆ! ನಿನ್ನಾಣೆಗೂ ಬರ್ತವೇ.. ಅದಕ್ಕೆ ನಾ ಹೇಳಿದ್ದು ನಿನಗಿಂತ ಅವೇ ಎಷ್ಟೋ ವಾಸಿ ಅಂಥ!! ನಮ್ ಕಾಲೇಜ್ ರೋಡಲ್ಲಿರೋ “ಪ್ರಿಯಾ ಬೇಕರಿ” ನೋಡಿದಾಗ.. ಅಲ್ಲಲ್ಲಿ ಕಾಣೋ…”ಪ್ರಿಯಾ ಸೀಮೆಂಟ್” Advertise ನೋಡಿದಾಗ.. ಟಿ.ವಿ..ಲೀ ಬರೋ..”Priya Gold” biscuits Ad ನೋಡಿದಾಗ ತಕ್ಷಣ ನಿನ್ ನೆನಪಾಗುತ್ತೆ ಕಣೆ..!! (ನನ್ನನ್ನ ಎಂಥಾ ಹುಚ್ಚನನ್ನಾಗಿ ಮಾಡ್ ಬಿಡ್ತೇ ನಿನ್ ಹೆಸರು..ನಿನ್ ನೆನಪು…!!?) ಅದಕ್ಕೆ ಹೇಳೋದು “ನೆನಪುಗಳ ಮಾತು ಮಧುರ..” ಅಂಥ!
ಹಾಗೆ.. ನಿನಗೆ ಗೊತ್ತಿಲ್ಲದೇ ನೀನು ಕೊಡೋ ನೋವಿಗಿಂತ ನಿನ್ನ ನೆನಪುಗಳು ನೀಡೋ ನೋವು..mmm!!.. ನಿಜಕ್ಕೂ ಅತೀ ಮಧುರ..!!ಅವು ಏನಾದ್ರೂ ಕಣ್ಣಿಗೇ ಕಾಣೋ ಹಾಗಿದ್ರೆ.. ಕೈಗೆ ಸಿಗೋ ಹಾಗಿದಿದ್ರೆ ಅವುಗಳನ್ನೇ ಕಟ್ಕೋಂಡ್‍ಬಿಡ್ತಿದ್ದೆ!! .. ನಗು ಬಂತಾ..!!?ಅದೇ ನನಗೂ ಬೇಕಾಗಿರೋದು.. ಅದೇ ನಿನ್ ನಗು..just.. be haPy.. keeP smiliNg..! I wanna leave..!! ನಿನ್ನ ನಗುವಿಲ್ಲದೆ ಹೂ..ಹೂಂ i cant!!… ನಾನ್ ಬದುಕಕ್ಕೆ ಆಗಲ್ಲ!
ಆ “ತೀರ” ಕಾಣದ ಕಡಲಲಿ..ಕ್ಷಣದಲಿ ಮರೆಯಾಗೋ ಅಲೆಗಳಲ ಮೇಲೆ..ಮನದ ಸಾಲುಗಳ ತುಂಬಿ ಪ್ರೀತಿಯ ದೋಣಿಯ ಕಳುಹಿಸಿದವ….. ನಾ(ಗು)ವಿಕ!!

ಗೆಳೆಯಾ ನಾಗೆಶನ್ ಹೃದಯದಿಂದ.....ಪ್ರೀತಿಸಿದ ಹುಡುಗಿ..


ಹಾಯ್..ಹೃದಯವಿದ್ದರೂ ಪ್ರೀತಿಸಲು ಬರದ ಹುಡುಗಿ.. ಪ್ರಿಯಾ..!!ಹೇಗಿದ್ದೀಯಾ…?
ಬಿಡು ನೀನ್ ಚೆನ್ನಾಗೇ ಇರ್ತೀಯಾ.. ನಿಂಗೇನು ದಾಡಿ.ಓಹ್ ನೋಡು ನಿಂಗೆ Exam ಇರೋದ್ ಮರ್ತೇ ಹೋಯ್ತು ನಂಗೆ, Sorry ಕಣೇ Disturb ಮಾಡ್ತೀರೋದಕ್ಕೆ: ನೀನು ನನ್ನ Disturb ಮಾಡಿರೋದ್ರ ಮುಂದೇ ಇದು ಯಾವ ಲೆಕ್ಕ ಬಿಡು.ಸದ್ಯಕ್ಕೆ ನಿನಗೆ Disturb ಮಾಡ್ತೀರೋದಕ್ಕೆ ಕಾರಣ… ಕಾರಣ… ಹೇಳಲಾ ಬೇಡವಾ..? ಅಂಥ ಭಯ ಆಗ್ತಿದೇ ಕಣೇ…! ಆದ್ರೂ ಹೇಳ್ತಿನಿ ಕೇಳು..ನಾನು ಇವಾಗಿವಾಗ ತುಂಬ ತುಂಬಾನೇ.. Disturb ಆಗಿದಿನಿ.. ನಿನ್ನಿಂದ ಅಲ್ಲ.. ನಿನ್ನ ನೆನಪುಗಳಿಂದಾನೂ ಅಲ್ಲ… Iam sorry to say tizZ!! ಆದ್ರೂ ನಾನು ಹೇಳಲೇಬೇಕು… ನೀನ್ ಕೇಳಲೇಬೇಕು..
ಹೌದು.. ನಿಜ… ಈಗೀಗ ನಿನ್ನ ನೆನಪಾಗ್ತ ಇಲ್ಲ… ಕನಸಂತೂ.. ಕಾಣ್ಟಾನೇ ಇಲ್ಲ… ನಿನ್ನ ಕಣ್ಣಾಣೆಗೂ…ಎದುರಿನ ಮನೆಗೆ ಹೊಸತಾಗಿ ಬಾಡಿಗೆ ಬಂದಿರುವ Police ಅಂಕಲ್ ಮಗಳು ಆ ಪಾಟಿ ಮೋಡಿ ಮಾಡಿದಾಳೆ… ಅಥವಾ.. ನಾನ್ ಅವಳ ನಗುವಿನ ಬಲೆಗೆ ಬಿದ್ದೀದಿನಿ ಅಂತಿಟ್ಕೋ..ಅವಳ ಹಸನ್ಮುಖ, ಆ ಹುಬ್ಬು ಸಾಲುಗಳು…ಅವಳು ಇಡೋ ಪ್ರತಿ ಹೆಜ್ಜೆಯ ಶೈಲಿ.. ಅವಳು ನಗೋದ್ ನೋಡ್ತಾ ಇದ್ರೆ… ಎಂಥಾ ಹನುಮಂತನಿಗೂ ಪ್ರೀತಿ ಹುಟ್ಟದೇ ಇರದು…ಅವಳನ್ನ ಜಾಸ್ತಿ ಹೋಗಳ್ತಾ ಇದಿನಿ ಅಂಥ ಬೇಜಾರ್ ಮಾಡ್ಕೋಬೇಡ…ಏನ್ ಮಾಡ್ಲಿ… ನಾನ್ ಅವಳ ಬಗ್ಗೆ ಬರೀಯೋದ್ ಬೇಡ, ಹೇಳೋದಂತೂ ಬೇಡ್ವೇ ಬೇಡಾ..ಅಂಥ ಅನ್ಕೋಂಡೆ..Control ಮಾಡ್ಕೊಂಡೇ.. ಉಹೂಂ… ಆಗ್ಲಿಲ್ಲ… Am Sorry ಕಣೇ…!!ನೀನು ನನ್ನ ಸೋಲಿಸಿದ್ದಕ್ಕಿಂತ ಜಲ್ದಿ.. ಇವಳು ನನ್ನ ಸೋಲ್ಸಿಬಿಟ್ಟಳು.. ಮತ್ತೊಮ್ಮೆ… ಮಗದೊಮ್ಮೆ… Sorry ಕಣೇ…ಇನ್‍ಮುಂದೇ… ನಿನ್ನ ನೆನಪು ಅನ್ನೋದ್ ಆಗದೇ ಇಲ್ವೇನೋ…? ನನ್ ಮೇಲೆ ಕ್ಷಮೆ ಇರಲಿ…ನನ್ನ ಮನದ ಬಂಜರು ನೆಲದಲ್ಲಿ.. ಒಲವ ಹೂವಿನ ಗಿಡ ಬೆಳೆಸಿದೋಳು ನೀನು… ಆದ್ರೆ ಇವತ್ತು ಅದೇ ಗಿಡದಲ್ಲಿ… ಬೇರೆ ಯಾವುದೋ ಮೊಗ್ಗಿದೆ… ಜೊತೆಗೆ ಸಿಗ್ಗಿದೆ…!!ಅವಳು ಆ ಗೌಡರ ಮನೆಗೆ ಬಂದ ಮೂರನೇ… ದಿನಕ್ಕೆ ಹುಟ್ಟಿದಬ್ಬ ಇತ್ತು.. ಏನ್ ಜೋರಾಗ್ Celebrate ಮಾಡಿದ್ರೂ… ಅಬ್ಬಬ್ಬ…! ನಮ್ಮಂತ MiddleClass ಹುಡುಗರಿಗೆ.. ಅದೇ Super Rocking Party..!!ಅವಳ ಹೆಸರು… ಸುಮ.. ನಿನ್ನ ಹೆಸರಷ್ಟು ಚೆಂದ ಇಲ್ಲ.. ಆದ್ರೂ.. ಚೆಂದ ಇದೆ..!!
ಸುಮ…happy birthday to you… ಅಂದೆ… ನಿನ್ನ ಹುಟ್ಟಿದಬ್ಬಕ್ಕೆ ನಿನಗೆ ಕನ್ನಡದಲ್ಲಿ… “ಜನುಮ ದಿನದ ಶುಭಾಶಯಗಳು” ಅಂಥ ಚಿನ್ನಕನ್ನಡದಲ್ಲಿ ಹೇಳ್ದಾಗ ನೀನೆಷ್ಟು ಮುದ್ದಾಗಿ Thank u ಕಣೋ.. ಅಂದೇ ನೋಡು.. ಥೇಟ್ ಅದೇ Style ಅಲ್ಲಿ… ಇಳಿಬಿದ್ದ ಮುಂಗುರುಳು ನೇವರಿಸ್ಕೊಂಡು.. ಹೇಳ್‍ದ್ಲು ನೋಡು.. ನಾನ್ ಅಲ್ಲೇ ಬೋಲ್ಡು…!!
ಎಲ್ಲರ ಎದುರು… ನನ್ನ ನಿನ್ನ ತೋಳಲ್ಲಿ ಎತ್ಕೋ… ಅಂದ್ಲು… ನಿನ್ನ ಕೆನ್ನೆಗೆ ಒಂದೇ.. ಒಂದು “ಪಪ್ಪಿ” ಕೊಡ್ಬೇಕು… ಅಂದ್ಲು.. ಆ ಐದನೇ ವರ್ಷದ ಹುಟ್ಟು ಹಬ್ಬ Celebrate ಮಾಡ್ಕೊಳ್ಳುತ್ತಿದ್ದ… ಹುಡುಗೆ.. ನಿಜವಾಗ್ಲು.. ಅಂದಿದ್ದೇ ತಡಾ.. ಮುಗಿಲನ್ನೆ ಮುಟ್ಟಿಸೋ ಹಾಗೆ.. ಎತ್ಕೋಂಡ್ ಒಂದೇ.. ಒಂದು.. ಹೂ ಮುತ್ತಿಟ್ಟೇ… ಅವಳು … ಅಣ್ಣಾ… ನಿನ್ನ ಕೆನ್ನೆಗೆ ಒಂದು ಪಪ್ಪಿ ಕೊಡ್ಬೇಕು ಅನಿಸ್ತಾ ಇದೆ.. ಆದ್ರೆ ನಿನ್ನ ಗಡ್ಡ.. ಅಡ್ಡ ಬಂದು ಚುಚ್ಚುತ್ತೆ… ಅಂದ್ಲು.. ನೋಡು…ಅಲ್ಲಿದ್ದ ಎಲ್ಲರೂ… ನಾನು ಸೇರಿ.. ನಕ್ಕು..ನಕ್ಕು… ಸುಸ್ತಾಗಿಬಿಟ್ವಿ… ಕಣೇ…
ನಿಜವಾಗ್ಲೂ.. ಅವಳು ಜೊತೇಲಿ ಯಾವಗ್ಲೂ ಇರ್ತಾಳೆ.. ನಿನ್ನಷ್ಟು ಹಠ ಮಾಡಲ್ಲ.. ಆದ್ರೆ ನಿನ್ನಷ್ಟೇ ಚೆಂದವಾಗಿ ಮುನಿಸಿಕೊಳ್ತಾಳೆ.. ನಗ್ತಾಳೆ… ಇಂತದ್ರಲ್ಲಿ ನಿನ್ನ ನೆನಪಾಗೋದು ದೂರದ ಮಾತು…ನೋಡು… ವಿಧಿ ಅಂದ್ರೆ .. ಇದೇ ಇರ್ಬೇಕು.. ಅವಳಿಗೆ ಅವರಪ್ಪ ನಾಳೆ.. ನಾನು…ನೀನು ಓದಿರೋ ಅದೇ.. ಸ್ಕೂಲಲ್ಲಿ L.K.Gಗೆ Admission ಮಾಡಿಸ್ತಾ ಇದಾರೆ..ಅವಳು ಇನ್ಮೇಲೆ.. A.B.C.d..,one two thre.. ಓದ್ಬೇಕು.. ಹೇಳ್ಕೊಡು..ಅಂತಾಳೆ.. ಅವಳಿಗೆ ಹೇಳ್ಕೋಡೋಷ್ಟರಲ್ಲಿ ಸಾಕು ಸಾಕಾಗುತ್ತೆ… ಅವೆಲ್ಲರ ಮದ್ಯೆ.. ನಿನ್ನ ನೆನಪು.. ತಿಂಗಳಿಗೊಮ್ಮೆ ಬರೋ “ಹುಣ್ಣಿಮೇ”ನೇ..ಸರಿ..
ಒಕೆ.. ಕಣೇ.. ಬೇಜಾರ್ ಮಾಡ್ಕೋಂಡಿದ್ರೆ.. ನನ್ ಮೇಲೆ ಕ್ಷಮೆ ಇರಲಿ… ಅಚ್ಚರಿಯಾಗಿದ್ರೆ.. ಮೊಗದ ಮೇಲೆ ಹೂ ನಗುವಿರಲಿ…ನೀನ್ ಅದೆಲ್ಲೋ ನಕ್ಕರೆ, ನನಗಿಲ್ಲಿ ಖುಷಿ ಆಗುತ್ತೆ.. ನಾನು ನಗ್ತೀನಿ.. ಸುಮ್..ಸುಮ್ನೇ…!ಮತ್ತೆ ಯಾವಾಗ್ ಬರಿತಿನೋ.. ಗೊತ್ತಿಲ್ಲ…(ನಿಮ್ಮಪ್ಪ..ನಿನ್ಗೆ ಅದ್ಯಾವಾಗ mobile ಕೊಡಿಸ್ತಾಣೋ… ನಿನ್ನ ಅಮ್ಮನಿಗೇ ಗೊತ್ತು,,,!!..ನಾನ್ ನಿನಗೆ Sms, misscall, call ಮಾಡೋದ್ ಯಾವಾಗೋ..ಗೊತ್ತಿಲ್ಲ)
ಒಕೆ.. ಟಾಟಾ.. ಕಣೇ… ಅವಳು ಅವರ ಮನೆ ಕಾಂಪೌಂಡಲ್ಲಿ ನನಗೋಸ್ಕರ ಕಾಯ್ತಾ ಇದ್ದಾಳೆ.. ಅವಳ ಜೊತೆ.. ಅವಲಕ್ಕಿ…ಬುವಲಕ್ಕಿ… ಆಡ್ಬೇಕು… ಬರ್ತೀನಿ…Bye..!! take care.
be haPPy… keeP smiliNg..!
……….. ನಿನ್ನ ನಗುವ ಬಯಸೋ… ನಾಗು!!

ಕಂಪ್ಯೂಟರ್ ಪ್ರೇಮ ಪತ್ರ..


ಇದೊಂದು ಪಕ್ಕಾ Technical Love Letterru…!ಒಬ್ಬ Computer Engineer ಬರೆದದ್ದು(ಕೊರೆದದ್ದು…!)———————————————————————————————————-ಹಾಯ್ …!
Monitor ಮಾದೇವಿಯೇ…! CPU ಶ್ರೀದೇವಿಯೇ…! ಹೇಗಿರುವೆ…? ಎಲ್ಲಿರುವೆ..?
ನನ್ನ ಹೃದಯದ HardDisk ನಲ್ಲಿ, ನಿನ್ನ ಕನಸುಗಳೆಂಬ Files ಗಳ save ಮಾಡಿ, ನೆನಪುಗಳೆಂಬ (ಸಿಹಿ) Virus ತುಂಬಿ, ಹೇಳದೇ ಕೇಳದೆ ಎಲ್ಲಿಗೆ ಹೋದೆ..!??
ಕ್ಷಮೆ ಇರಲಿ ಈ ಮಾತ್ ಹೇಳ್ತಾ ಇರೋದಕ್ಕೆ…,ನನ್ನ ಈ ಹೃದಯವೆಂಬ HardDisk ಕೇವಲ ನಿನಗಾಗಿ ಮೀಸಲಲ್ಲ ಕಣೇ…! ಅದು ನನ್ನ ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮ, ಬಂದು ಮಿತ್ರರೆಲ್ಲರಿಗೂ ಸೇರಿದೆ..!ಅದರಲ್ಲಿ ಮೂರಾರು Partition ಮಾಡಿ, ಹಂಚಿ, ಒಬ್ಬೊಬ್ಬರಿಗೂ ಮೀಸಲಿಟ್ಟಿದ್ದೇನೆ..! ಅದು ಸರಿಯಾ ನಂಗೊತ್ತಿಲ್ಲ…! ಆದ್ರೆ ತಪ್ಪಾಗಿರಲಾರದು…!
Ofcorse..,ನನ್ನ ತಾಯಿ-ತಂದೆ ನಂತರದ ಸ್ಥಾನ ನಿನಗೇನೆ…! ನಿನಗೆ ವಸಿ ಜಾಸ್ತಿಯೇ Space ಮೀಸಲಾಗಿದೆ..!ಅದು ಎಷ್ಟು GB ಯೋ ನಾ ಹೆಳಲಾರೆ..! ಆದ್ರೆಆದ್ರೆ, ತಿಳ್ಕೋ ನಿನಗಾಗಿ ಮೀಸಲಿಟ್ಟಿದ್ದ ಜಾಗ ಪೂರ ಇಂದು.. ಬರಿ ನಿನ್ನ ನೆನಪುಗಳೆಂಬ Virusಗಳಿಂದ Attack ಆಗಿದೆ..!ಯಾವ AntiVirus(ಬೇರೆ ಹುಡುಗಿಯರು…!) ಕೂಡ install ಆಗ್ತಿಲ್ಲ, ಅದ್ರೂ ಆ Virusಗಳನ್ನ Remove ಮಾಡಿ Delete ಮಾಡಲಿಕ್ಕೆ ಆಗ್ತಿಲ್ಲ..!ಇದಕ್ಕೆ Admisnistrator(ಆಡಳಿತಗಾರ್ತಿ…!) ಅಂದ್ರೆ ನಿನ್ನ ಜರೂರತ್ ಇದೆ..!ಅವೆಲ್ಲವನ್ನ ನಿನ್ನ ‘ನಗು, ಪ್ರೀತಿ .. ‘ ಎಂಬ Software install ಮಾಡಿ ಸರಿಪಡಿಸಬೇಕು…!ನೀನು ನನ್ನ ಪಾಲಿಗೆ ಕೇವಲ “ನೆನಪು” ಆಗ್ಬೇಡ.. ಬಾಳಿನ ಉದ್ದಗಲಕ್ಕೂ ಬದುಕೋ “ಕ್ಷಣ”ಗಳಾಗಬೇಕು…!
ಮೆದುಳೆಂಬ Processor On ಆಗಿ, Run ಆಗ್ತಿರೋ ತನಕ, ಮಿನುಮಿರುಗೋ Mionitor ಆಗ್ಬೇಕು.. ನನ್ನ ಬಾಳೆಂಬ Taskಗೆ ಬೆಳಕಾಗಬೇಕು..!ಅದು ಹೇಗೆ, ಎಲ್ಲಿ, ಯಾವಾಗ ನಂಗೊತ್ತಿಲ್ಲ..!
ಈ ಪ್ರೀತಿ ಎಂಬ ಅಂತರ್ಜಾಲ.. Sorry ಮಾಯಾಜಾಲದಲ್ಲಿ, ನಾನಂತು ಸಿಕ್ಕಿ ಒದ್ದಾಡುತಿದ್ದೇನೆ..!ಇಲ್ಲೇ ಬಿದ್ದಿರ್ಲಿ Bloody Heart Hacker ಅಂಥ ಸುಮ್ಮನಾಗ್ತಿಯೋ.., ಅಥವಾ ನನ್ನ Love software ನ ನಿನ್ನ ಎದೆಗೂಡಿನ Heart ಎಂಬ Hardiskನಲ್ಲಿ install ಮಾಡ್ಕೋತಿಯೋ ನಿಂಗ್ ಬಿಟ್ಟಿದ್ದು…!
ಮಾತಾಡೋಕ್ಕೆ ಮನಸಾದ್ರೆ Mailನಲ್ಲಿ ಮುನ್ಸೂಚನೆ ಕಳಿಸು..!, ಆದ್ರೆ ಅದರಲ್ಲಿ ಬರಿ “ಮೌನದ” Attachment ಬೇಡ..!ಕನಸಾಗಿ ಕಾಡಬೇಕೆನಿಸಿದರೆ ಒಂದೊಳ್ಳೆ Greeting ಕಾರ್ಡು ಕಳಿಸು.., ಅದ್ರಲ್ಲಿ ನಿನ್ನ ” image ” ಹಾಕದೆ ಇರಬೇಡ..!
ಒಟ್ಟಿನಲ್ಲಿ ಈ ಜೀವ Shut Down ಆಗೋ ಮುನ್ನ, ಪ್ರೀತಿಯ Software ನ, ನಿನಗೋಸ್ಕರ್ ಅಂತಲೇ ಮೀಸಲಿಟ್ಟಿರೋ Spaceನಲ್ಲಿ install ಮಾಡು..!ಇಲ್ಲವಾ, Restart ಮಾಡು.. ಇನ್ನೊಂದ್ ಜನ್ಮ ಇದೆ ಅನ್ನೋದಾದ್ರೆ Wait ಮಾಡು…!
Love me Or Hate me…!Kiss me Or Kill me..!
Oh Darling, Plz Do Something to me…!
ಹಾಗೆ ಸುಮ್ಮನೆ ಮಾತ್ರ ಇರಬೇಡ….!
ಇಂತಿ,ನಿನಗೆ ಪ್ರೀತಿಯ Invitation ಕಳ್ಸಿ Approval ಗೆ ಕಾಯ್ತಾ ಇರೋ…,{ಸಂಗ್ರಹ.. ಗೆಳೆಯನ ಹೃದಯದಿಂದ..}