Tuesday, December 25, 2007

kavanagalu

ಸುಮ್ಮನೆ ಹೇಳುತ್ತಿಲ್ಲ
ನಿನಗಾಗಿ ನಾನು ಏಳು ಸಾಗರಗಳನ್ನ
ದಾಟಿಬಂದರು ಅಚ್ಚರಿಯಿಲ್ಲ!
ನಿನ್ನೊಳಗೆ ನನಗಾಗಿ
ಏಳು ಮಲ್ಲಿಗೆ ತೂಕದ ಪ್ರೀತಿಯಿದೆಯೆ?
ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನ
ನಿನ್ನ ಗುಂಗಿನಲ್ಲೆ ಕಳೆದಿದ್ದಿದೆ!
ಒಮ್ಮೆಯಾದರು ನೀನು
ಮಗ್ಗಲುಬದಲಿಸುವಾಗ ನನ್ನ ನೆನೆದಿದ್ದಿದೆಯ?

ನನಗಿಲ್ಲಿ ನಿನ್ನ ನೆನಪುಗಳೇ
ನನ್ನ ಬೆಳಕಾಗಿರುವಾಗ!
ನೀನು ನನ್ನೊಳಗೆ ಬಂದು
ಒಮ್ಮೆಯಾದರು ಕಚಕುಳಿ ಇಟ್ಟಿದ್ದಿದೆಯ?

ನಾನು ಬರೆದ ಕವಿತೆಗಳ
ಪ್ರತಿಸಾಲಿನಲ್ಲಿ ನಾನು ನಿನ್ನ
ಮುದ್ದು ಹೆಸರಪ್ರೀತಿಯಿ೦ದ ಬರೆದಿದ್ದಿದೆ!
ಅಷ್ಟು ಚಂದ ಹಾಡುವ
ನೀನುಒಮ್ಮೆಯಾದರು ನನಗೆ ಲಾಲಿ ಹಾಡಿದ್ದಿದೆಯ?

ಸಾಕು ಸಾಕಿನ್ನು
ನಿನ್ನ ನೆನಪೊಳಗೆ
ನನ್ನ ಮರೆಯುವುದನಾನು ನಾನಾಗಬೇಕಿದೆ
ನೀನಿಲ್ಲದೆಆದರೆ ನಾ ಇಡುವ
ಪ್ರತಿಹೆಜ್ಜೆಹೆಜ್ಜೆಯಲ್ಲಿಯೂನಾ
ನಿನ್ನ ನೆನೆಯದಿದ್ದರೆ ನನ್ನಾಣೆ…..


Nanna Gelathi
ಮೆಲ್ಲಮೆಲ್ಲನೆ ಬೀಸುವ ತಂಗಾಳಿ
ನನ್ನ ಗೆಳತಿಯ ಬಳಿಯಲೊಮ್ಮೆ
ಸುಳಿದು ನೋಡುಅವಳಿಂದ
ನೀನು ಮತ್ತಷ್ಟು ತಂಪಾದರು ಆಶ್ಚರ್ಯವಿಲ್ಲ !

ಭುವಿಯ ಸವಿಯ ಹೆಚ್ಚಿಸುವ
ಮುದ್ದು ಮುದ್ದುಹೂವುಗಳೇ,
ಒಂದೇ ಒಂದು ಸಲ ಇವಳನೆನಪು ಮಾಡಿಕೊಳ್ಳಿ,
ಮಲಿನಗೊಂಡ ಮನಗಳಿಗೆಮತ್ತಷ್ಟು
ಮುದ ನೀಡುವ ಸೌಂದರ್ಯ ನಿಮ್ಮದಾಗಬಹುದು !

ಬದುಕಿನ ಆಸೆಯನ್ನ
ಹೊರಹೊಮ್ಮಿಸುವಸುಂದರ
ಕವನಗಳೆ ಒಂದೇ ಒಂದು ಸಾರಿಇವಳ
ಮೃದು ಹೃದಯದೊಳಿಳಿದು ಬನ್ನಿ,
ಈ ಮಾಯಗಾತಿಯ ಮೈ ಸ್ಪರ್ಶದಿಂದಲಾದರು
ನಿಮ್ಮ ಸಾಲುಗಳು ಇನ್ನೂ ಶ್ರೀಮಂತವಾದಾವು !

ರಾತ್ರಿ ಮಿನುಗುವ
ಚಂದಮಾಮನೇಯಾಕಿಷ್ಟು ಕೆಂಪಾಗಿದ್ದಿ
ತಂಪಾಗಿದ್ದಿ ?ಗೊತ್ತಾಯಿತು ಬಿಡು…
ಇವಳು ನಿನ್ನ ಕನಸಲ್ಲಿ ಬಂದಿರಬೇಕು !

ನಕ್ಷತ್ರಗಳೇ ನಿಮಗೆ ಏನು
ಅನ್ನಿಸುವುದಿಲ್ಲವೆ?ಈ ಮಲ್ಲಿಗೆಯ
ಮಗಳಿಂದ ಅದೆಷ್ಟು ದೂರವಿದ್ದೀರಿ !
ಸುಮ್ಮನಿಳಿದು ಬಂದಿವಳ ಜೊತೆ
ಜೊತೆಯಾಗಿಆಟವಾಡಿಕೊಂಡಿರಬಾರದೇನು !
ಇವಳೇನು ದೂರದವಳ?ನಿಮ್ಮ ಚಂದಮಾಮನ ತಂಗಿಯಲ್ಲವೇನು !


ಕವಿತೆ ಹುಟ್ಟುತಿಲ್ಲ......
ಎದೆಯೊಳಗೆ ನೂರಾರು
ಕವಿತೆಅದೆಷ್ಟೋ ಸಾಲುಗಳು,
ಅದೆಷ್ಟೊಮೊಗೆದಷ್ಟು
ಭಾವನೆಗಳು, ಬೇಡಿದಷ್ಟು ಕನಸು !
ತುಂಬಿಕೊಂಡು ಬರೆಯಲು ಕುಳಿತರೂ,
ಒಂದು ಕವಿತೆ ಹುಟ್ಟುತ್ತಿಲ್ಲವೆಂದು ಬಿಕ್ಕಳಿಸುತ್ತೇನೆ !!!

ಕನಸಿನಲ್ಲೂ ಹಾಗೆ
ಅದೆಷ್ಟೋಸಾಗರದಷ್ಟು ಪದಗಳು
ಬಂದುನನ್ನೊಡನೆ ಕಧನಕ್ಕಿಳಿಯುತ್ತವೆ !
ಒಂದೊಂದು ಪದಗಳಿಗು ಮುದ್ದು ಮಾಡಿ
ತಲೆ ನೇವರಿಸಿ ಬಂದು ಬರೆಯಲು ಕುಳಿತರೂ
ಬರೆಯಲಾಗದೆ ಮತ್ತೆ ಬಿಕ್ಕಳಿಸುತ್ತೇನೆ !!!

ಬೆರಳ ತುದಿಯಲ್ಲೇ
ಶಭ್ಧಗಳ ಬಂಡಾರಸುಮ್ಮನೆ ಬಂದು
ಹೆಗಲೇರಿ ಕಚಕುಳಿಯಿಡುತ್ತವೆ
ಒಂದೊಂದು ಪದಗಳೂ,
ನಲ್ಲನ ನಲ್ಲೆಯ ಹಾಗೆ ಸುಂದರಬೆರಳ ತುದಿಯಲ್ಲಿದ್ದರೆ ಸಾಕೆ?
ಮನದೊಳಗೆ ಚಿತ್ತಾರ ಮಾಡಬೇಡವೆ?
ಚಿತ್ತಾರವಿಲ್ಲದ ಕವಿತೆ ಬರೆದು ನನಗು ಅಭ್ಯಾಸವಿಲ್ಲ !
ಒಂದೆ ಒಂದು ಸಾಲು ಬರೆಯದೆ ನನ್ನಲ್ಲೆ ಬೆತ್ತಲಾಗುತ್ತೇನೆ !!!

ಉಮ್ಮಳಿಸಿ ಬರುವ ದುಃಖವನ್ನ
ತಡೆಹಿಡಿದು ಬೇಡಿದರು ಕೇಳುತ್ತಿಲ್ಲಪದಗಳು !
ನವವಧುವಿನಂತೆ ಶೃಂಗರಿಸಿ
ಬರೆಯುತ್ತೇನೆಂದರು ಕೇಳುತ್ತಿಲ್ಲ ಪದಗಳು !
ನಮ್ಮನಮ್ಮೊಳಗೇ ವಿರಾಮವಿಲ್ಲದ
ಕದನಸುಮ್ಮನ ಹಠ ! ಬರೆಯಲಾಗುತ್ತಿಲ್ಲ ಕವನ!!!

ಕವಿತೆಗಳೇ ಹಾಗೆ,
ಎಷ್ಟು ಗೋಗರೆದರುಬೇಡಿಕೊಂಡರು,
ಯಾರ ಮಾತು ಕೇಳುವುದಿಲ್ಲ
ಪ್ರೀತಿಯಿಲ್ಲದೆ ಕರೆದರೆ ಹೇಗಾದರು ಬಂದೀತೆ
ಕವಿತೆಪ್ರೀತಿ ಇಲ್ಲದೆ ಬರೆದರೆ ಅದು ಆದೀತೆ ಕವಿತೆ !!!


ಗೆಳತಿಯ ಗುಟ್ಟು..............
ಹತ್ತಾರು ಕವಿತೆಯಲ್ಲಿರದ
ಶಕ್ತಿನಿನ್ನ ಕಣ್ಣಾಲೆಗಳಲ್ಲಿದೆಯಲ್ಲ
ಗೆಳತಿಅದರ ಗುಟ್ಟೇನು..!!
ನೂರಾರು ನೋವುಗಳು
ನಿನ್ನ ನಗುವ ಮಾಯೆಯಲ್ಲಿ
ಮಾಯವಾಗುವುದರ ಗುಟ್ಟೇನು ಗೆಳತಿ..!!

ಯಾರೊ ಬರೆದ
ಪ್ರೀತಿಯಕವಿತೆಯೊಳಗೂ ನಿನ್ನ ಛಾಯೆ !
ಯಾರೋ ಹಾಡಿದ
ಹಾಡಿನೊಳಗೂನಿನ್ನದೇ ಪ್ರೀತಿಯ ಮಾಯೆ
ಮಾಯೆನಿನ್ನ ಕುರಿತು ಬರೆದ
ಪ್ರತಿ ಪದಗಳೂಬಂಗಾರವಾಗುವುದರ ಗುಟ್ಟೇನು ಗೆಳತಿ..!!

ನೀನಾಡುವ ಪ್ರತಿ
ಮಾತುಗಳುನೊಂದ ಹೃದಯಕ್ಕೆ
ಮಲ್ಲಿಗೆಯಾಗುವುದರ ಗುಟ್ಟು ?
ನೀ ನೋಡುವ ಪ್ರತಿ ಹೂವುಗಳೂ
ಗುಲಾಭಿಯಾಗುವುದರ ಗುಟ್ಟೇನು ಗೆಳತಿ..!!

ಮನ ಮರುಗಿದಾಗಲೆಲ್ಲ
ನನ್ನ ಮನ ನಿನ್ನ
ಹೆಗಲ ಬೇಡುವುದರ ಗುಟ್ಟೆನು?
ಕೂಡಿ ಬೆಳೆಯಲಿಲ್ಲ,ಕೂಡಿ ಬೆರೆಯಲಿಲ್ಲ
ಆದರೂ ಅರೆಕ್ಷಣ ನಿನ್ನಗಲಿರಲಾರದ
ಮಧುರ ನೋವಿನ ಗುಟ್ಟಾದರೂ ಏನು ಗೆಳತಿ..!!

ನಟ್ಟ ನಡುರಾತ್ರಿ
ಬೆಚ್ಚಿ ಬೀಳಿಸುವ
ಕನಸುಗಳಿಗೆ ನಿನ್ನ ನೆನಪು ಮಾಡಿದೆ !
ಕನಸುಗಳೇನೊ ಮತ್ತೆ ಮತ್ತೆನನ್ನೆದೆಗೆ ಜಾರುತ್ತಿವೆ..!
ಆದರೆ ಬೆಚ್ಚಿ ಬೀಳಿಸುತ್ತಿಲ್ಲಮನದೊಳಗೆ
ಚಿತ್ತಾರ ಬಿಡಿಸುತ್ತಿರುವುದರ ಗುಟ್ಟೇನು ಗೆಳತಿ..!!


ನಲ್ಲೆ, ನಿನ್ನ ಮರೆಯಲು... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------------------
ನಲ್ಲೆ, ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ
ಮಾಮರದಲಿ ನಿನ್ನದೇ ಗಾನ ಮಂಜುಳ

ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಲಿವೆ
ದುಃಖದ ಮಡು ಮಾತಿಲ್ಲದೆ ಮೌನ ತಾಳೀದೆ.

- ಬಿ ಆರ್ ಲಕ್ಷ್ಮಣರಾವ್.


ಮರು ವಸಂತ.... ಕವನ ಸಂಕಲನ - ಸುಬ್ಬಾ ಭಟ್ಟರ ಮಗಳೇ.
-----------------------------------------------------------
ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ

ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.

ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.

- ಬಿ ಆರ್ ಲಕ್ಷ್ಮಣರಾವ್.


ಈ ಕಂಗಳು....ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ಈ ಕಂಗಳೇನೋ ನನ್ನವು
ನೋಟ ನಿನ್ನದು
ಈ ನೆಲವ ಹಸಿರು ಹೊಲವ ಗೈದ
ಮಾಟ ನಿನ್ನದು

ನಿನ್ನ ಕನಸುಗಣ್ಣಿನಲ್ಲಿ
ನನ್ನ ಕನಸಿದೆ
ನನ್ನ ಮನದ ದೇಗುಲದಲಿ
ನಿನ್ನ ಮನಸಿದೆ

ನನ್ನ ಹೆಜ್ಜೆ, ನಿನ್ನ ಹಾದಿ
ಪ್ರೇಮದೂರಿಗೆ
ನಿಂತ ಕಡೆಯೆ ನಮ್ಮ ತಾಣ
ಗಗನ ಸೂರಿಗೆ

ಎಲ್ಲ ಬಂಧ ಬಿಡಿಸಿ, ನೀನು
ನನ್ನ ಬಂಧಿಸಿದೆ
ಈಗ ನನಗಿದೊಂದೇ ಸಾಕು
ನಿನ್ನ ಪ್ರೇಮಸುಧೆ..

- ಬಿ ಆರ್ ಲಕ್ಷ್ಮಣರಾವ್.


ಒಡೆಯದ ಒಡಪೇ...ಕವನ ಸಂಕಲನ - ಸುಬ್ಭಾಭಟ್ಟರ ಮಗಳೇ.
----------------------------------------------------------
ಒಡೆಯದ ಒಡಪೇ, ಒಲವಿನ ಮುಡಿಪೇ
ಸನಿಹಕೆ ಸೆಳೆದವಳೇ
ಕಾಡುವ ಕನಸೇ, ಕನ್ನಡಿ ತಿನಿಸೇ
ದೂರವೇ ಉಳಿದವಳೇ
ಬಾರೇ ಬಾ ಬಳಿಗೆ
ಇಂದೇ ಈ ಗಳಿಗೆ

ಮಾಯಾಜಿಂಕೆಯ ನಡೆಯವಳೇ
ಬೆಡಗಿನ ನಿಗೂಢ ನುಡಿಯವಳೇ
ನೋಟದ ತುಂಬ ನಿನ್ನದೇ ಬಿಂಬ
ನನ್ನೀ ಕಂಗಳಗೆ

ಕಿನ್ನರ ಲೋಕದ ಕನ್ನಿಕೆಯೇ
ನಿಜವನು ಮರೆಸುವ ಜವನಿಕೆಯೇ
ಕವಿದರೂ ಇರುಳ, ನೀ ಬಳಿ ಇರಲು
ಉಜ್ವಲ ದೀವಳಿಗೆ

ಕಲ್ಪಯಲ್ಲೇ ಎಷ್ಟು ದಿನ
ಕಾಡುವೆ ಹೀಗೆ ಪ್ರ್‍ಇಯಕರನ?
ಬಾ ಕನಿಕರಿಸಿ, ನನ್ನನು ವರಿಸಿ
ಬಾಳಿನ ಪಾತಳಿಗೆ.

- ಬಿ ಆರ್ ಲಕ್ಷ್ಮಣರಾವ್


ನನ್ನವಳು... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ನಾನಿಂದು ಕಂಡೆ ಆ ಹೆಣ್ಣನು
ನಾ ಕಂಡುಕೊಂಡೆ ನನ್ನವಳನು

ಆ ಬೊಗಸೆ ಕಣ್ಣುಗಳನ್ನು ಏನೆನ್ನಲಿ ?
ಜೋಡಿ ನಂದಾದೀಪ ದೇಗುಲದಲಿ
ಹಣೆಯಲ್ಲಿ ಕುಂಕುಮಬೊಟ್ಟು ಉದಯರವಿಯು
ಮೂಗಲ್ಲಿ ಮುತ್ತಿನ ನತ್ತು ಚಂದ್ರಾಮನು

ನಕ್ಕಾಗ ಕೆನ್ನೆಗಳಲ್ಲಿ ಎಂಥಾ ಗುಳಿ !
ಚುಂಬನದ ಆಸೆಗೆ ಸೆಳೆವ ಸುಂದರ ಸುಳಿ
ಅವಳ ದನಿಯೋ ಮಂಜುಳ ರಾಗಮಾಲಿಕೆ
ಅಂಗಾಂಗದ ಬಣ್ಣನೆಯೇಕೆ ? ಶಿಲಾಬಾಲಿಕೆ

ಅವಳ ಹೃದಯ ವಿಶಾಲ ಕಡಲಿನ ಹಾಗೆ
ಅದರಲ್ಲಿ ಮುಳುಗಿದೆ ನಾನು ನಿಧಿ ಶೋಧಕೆ
ಹವಳವೆ? ಮುತ್ತೆ? ಅಲ್ಲಿ, ತಳದಲೇನಿದೆ ?
ಅಲ್ಲುಂಟು ಭಾಗ್ಯಶಾಲಿಗೆ ಪ್ರೀತಿಯ ಸುಧೆ.

- ಬಿ ಆರ್ ಲಕ್ಷ್ಮಣರಾವ್.


ಹದಿಹರೆಯದ ಹಾಡು.... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ
----------------------------------------------------------------
ಈ ಬೀದಿಯಲ್ಲಿ ನಾ ಓಡಾಡಿದ್ದೆ
ಬೇಕಾದಷ್ಟು ಸಲ
ಈ ನಗರದ ಎಲ್ಲಾ ಬೀದಿಗಳಂತೆ
ಧೂಳು, ಹೊಗೆ, ಗದ್ದಲ

ನಲ್ಲೆ, ನಿನ್ನ ಮನೆ
ಇಲ್ಲೇ ಇರುವುದು ತಿಳಿದೊಡನೆ
ಎಂಥಾ ಚೆಲುವು ಬಂತು ಬೀದಿಗೆ!
ಎಂಥಾ ಪರಿಮಳ!

ಧೂಳು ಈಗ ಧೂಳಲ್ಲ, ನನಗದೇ
ಪುಷ್ಪ ಪರಾಗ ರೇಣು
ಕಿವಿ ಗಡಚಿಕ್ಕುವ ಹಾರನ್ನುಗಳೇ
ಈಗ ಇಂಪಾದ ವೇಣು

ಬಸ್ಸು ಲಾರಿಯ ಹೊಗೆ
ಆಗರು ಧೂಪ ನನಗೆ
ನೀನಿರುವೆಡೆಯೇ ನನಗೆ ನಂದನ
ನೀನೇ ಕಾಮಧೇನು

ನೀನ್ನ ಮನೆಯೆ ದೇವಾಲಯ, ದೇವಿ
ನಾನು ನಿನ್ನ ಭಕ್ತ
ಯಾರೇ ನಕ್ಕರೂ ಕೇರು ಮಾಡದೆ
ನಿಂತಿರುವೆನು ಅನುರಕ್ತ

ನಿನ್ನ ಮನೆಯ ಮುಂದೆ
ನೆಟ್ಟ ಗರುಡಗಂಬದಂತೆ
ನಲ್ಲೆ, ನಿನ್ನ ದರ್ಶನಕ್ಕಾಗಿ
ನಾ ಹಂಬಲಿಸುತ್ತ

ಕರುಣಿಸಿ ನಿನ್ನ ಭಕ್ತನ ಮೇಲೆ
ಬಾರೇ ನೀ ಹೊರಗೆ
ಕಿಟಕಿಯನ್ನು ತೆರೆದಾದರೂ ಒಮ್ಮೆ
ನೋಡೇ ಈ ಕಡೆಗೆ

ಪ್ರೀತಿಯ ಒಂದು ನಗೆ
ಸಿಕ್ಕರೆ,ಅದೇ ಸಾಕು ನನಗೆ
ಬದುಕಿ ಉಳಿಯುವೆನು ಭರವಸೆಯಲ್ಲಿ
ನಾನು ನಾಳೆವರೆಗೆ.

- ಬಿ ಆರ್ ಲಕ್ಷ್ಮಣರಾವ್.

ಅಮ್ಮ....... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

-ಬಿ ಆರ್ ಲಕ್ಷ್ಮಣರಾವ್


ಕನಸು..... ಕವನ ಸಂಕಲನ- ಸುಬ್ಬಾಭಟ್ಟರ ಮಗಳೇ.
-----------------------------------------------------
ಏಕೆ ಬಂದೆ ನೀ ನಟ್ಟಿರುಳು
ಕನಸಿನ ಕದ ತೆರೆದು ?
ಏಕೆ ನಿಂತೆ ನೀ ಒಲಿದಂತೆ
ಬಿಗುಮಾನವ ತೊರೆದು ?

ನಗುವೆಯೇಕೆ ಹೊಸ ಹಗಲಂತೆ
ಹೊಂಬೆಳಕನು ಸೂಸಿ ?
ಕರೆವೆಯೇಕೆ ಹಾದಿಯ ತುಂಬ
ಹೂಗಳ ನೀ ಹಾಸಿ ?

ಕೈಗಳಲ್ಲಿ ನೀ ಹಿಡಿದಿರುವೆ
ಒಲವಿನ ಹೂಮಾಲೆ
ಕಂಗಳು ತಿಳಿಸಿವೆ ಇಂಗಿತವ:
"ನಿನ್ನವಳೀ ಬಾಲೆ"

ನಾ ಬಲ್ಲೆನು ಇದು ಕನಸೆಂದು
ಆದರೂ ನಾ ಬರುವೆ
ನೀ ಕರೆದರೆ ನಾ ಬರದಿರಲು
ಸಾಧ್ಯವೇ, ಓ ಚೆಲುವೆ ?

-ಬಿ ಆರ್ ಲಕ್ಷ್ಮಣರಾವ್.


ಹೃದಯ ಮೋಹಿನಿಗೆ....ಕವನ ಸಂಕಲನ - ದೀಪದ ಮಲ್ಲಿ.
----------------------------------------------------
ನಿದ್ದೆಯ ಬೇಲಿಯ ಕನಸಿನ ಬನದಲಿ
ಆಡುವ ಹೆಣ್ಣೆ, ನೀನಾರು ?

ಕಾಮನ ಬಿಲ್ಲಿನ ಸೀರೆಯ ಹೆಣ್ಣೆ,
ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ,
ಬಿಂಕದ ಹೆಣ್ಣೆ, ನೀನಾರು ?

ಎತ್ತಿದ ಮುಖವೊ ಚೆಲುವಿನ ಗೋಪುರ ;
ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ -
ಹೃದಯದ ಮರುಳೆ, ನೀನಾರು ?

ವಸಂತ ಹಸೆಮಣೆ ನಿನ್ನ ಹಣೆ;
ನಡುವೆ ಕುಂಕುಮದ ಚಿತ್ರಲತೆ -
ಕರೆದರೆ ನಿಲ್ಲದೆ ತಿರುಗಿ ನೋಡದೆ
ತೆರಳುವ ಹೆಣ್ಣೆ, ನೀನಾರು ?

ಕನಸಿನ ಬನದಲಿ ಕಮಲಾಕರದಲಿ
ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ
ಒಲಿಯದ ಹೆಣ್ಣೆ, ನೀನಾರು ?

ಕೆನ್ನೆಯ ಬಾನಲಿ ಮುತ್ತಿನ ಚಂದಿರ
ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ
ಮಾಯಾಮೋಹಿನಿ, ನೀನಾರು ?

- ಕೆ ಎಸ್ ಸರಸಿಂಹಸ್ವಾಮಿಯವರು


ಎಲ್ಲ ಮಲಗಿರುವಾಗ..... ಕವನ ಸಂಕಲನ - ನವಿಲ ದನಿ.
-------------------------------------------------------
ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ,
ಕಣ್ತುಂಬ ಹೊಂಗನಸು ಬೆಳಗಿನಲ್ಲಿ;
ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು
ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ.

ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ
ಸತ್ತ ಹೂಗಳ ರಾಶಿ ಲತೆಯ ಕೆಳಗೆ;
ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ
ನಾ ಕಂಡೆ ಹರುಷವನು ಮುಗಿಲ ಕೆಳಗೆ.

ಕೇಂದ್ರಬಿಂದುವಿಗೆ ಹತ್ತಿರವೊ ದೂರವೊ ಕಾಣೆ,
ಬೀಸುತ್ತಲೇ ಇತ್ತು ಮಂದಪವನ;
ಕಿಟಕಿಯನು ಮುಚ್ಚುದರೆ ತೆರೆದಿತ್ತು ಬಾಗಿಲು,
ಬಲು ಸೂಕ್ಷ್ಮ ಜೀವನದ ಚಲನವಲನ!

ಹಾಡಿನೀಚೆಗೆ ನೋವು ಕಾಡುತ್ತಲೆ ಇತ್ತು
ಬಾಯಿ ಮುಚ್ಚಿತ್ತೆನಗೆ, ಕಣ್ಣ ತೆರೆದೆ;
ಗೋಧೂಳಿಯಲ್ಲಿ ಹಸುಕರುಗಳನು ನಾ ಕಂಡೆ,
ನಡೆದದ್ದು ನಿಜವೆಂದು ಪದ್ಯ ಬರೆದೆ.

ನನ್ನ ಜೊತೆಗೂ ಬರುವ ಬೀದಿ ಮಕ್ಕಳ ಕಂಡೆ,
ಅವು ನಕ್ಕ ನಗೆ ದೇವರೆಂದುಕೊಂಡೆ;
ಹಸೆಯ ಮೇಲಿನ ಹೊಸತು ಜೋಡಿಯನು ನಾ ಕಂಡೆ,
ಇವರ ದೇವರು ಒಲವು ಎಂದುಕೊಂಡೆ!

- ಕೆ ಎಸ್ ನರಸಿಂಹಸ್ವಾಮಿಯವರು.

2 comments:

Human kind said...

ಕಂದಮ್ಮನನ್ನು ಉಣಿಸಲು ಈ ಕವನ)
ಚಂದಮಾಮ
ಬಾಂದಳದಲ್ಲಿ ನೋಡು ಕಂಡ ಮಿನುಗುವ ತಾರೆಗಳ
ಕಪ್ಪು ಪರದೆಯೊಳು ಹಾರಾಡಿದಂತೆ ಮಿಂಚುಹುಳ
ಎತ್ತ ನೋಡಿದರತ್ತ ಕಗ್ಗತ್ತಲು
ಚಂದಮಾಮ ಆಗಮನದೊಳು ಬೆಳದಿಂಗಳು
ಬೆಳ್ಳಿ ತಟ್ಟೆಯಲ್ಲಿ ನೋಡ ಮೊಲದ ಹೆಜ್ಜೆ
ಕುಣಿದಾಡುತ್ತಿದೆ ಕಂದ ನಿನ್ನಯ ಕಾಲ್ಗೆಜ್ಜೆ
ಚಂದಿರನ ಕಣ್ಮರೆಯ ಆಟ
ಕಂದಮ್ಮ ತಿನ್ನೊಂದು ತುತ್ತು ಊಟ
"ತುತ್ತು ಅನ್ನ ತಿನ್ನೋ ಓ ನನ್ನ ಮುದ್ದು ಕಂದ
ಅತ್ತ ನೋಡು ಚಂದಮಾಮನ ಸೊಗಸಾದ ಅಂದ"
ಬರೆದವರು:ತೇಜೇಶ್ ಕುಂಜತ್ತಬೈಲ್.

Unknown said...

These are very very nice plz send more and more