Friday, February 22, 2008

ಇದೇನಾ ಸ್ನೇಹ…?

`ನೀನು ಗೆದ್ದಾಗ ಜಗತ್ತೇ ನಿನ್ನ ಬೆನ್ನು ತಟ್ಟುತ್ತಿರುತ್ತದೆ, ಹೆಗಲ ಮೇಲೆ ಹೊತ್ತುಕೊಂಡಿರುತ್ತೆ. ಆದರೆ ನೀನು ಸೋತು, ಜರ್ಜರಿತನಾಗಿದ್ದಾಗ ಆಸರೆಗಾಗಿ ಹೆಗಲು ಕೊಡುವುದಕ್ಕೆ ಉಳಿಯುವುದು ಒಬ್ಬನೇ ಒಬ್ಬ ಅವನೇ ನಿನ್ನ ಗೆಳೆಯ’ ಎಂಬ ಮೆಸೇಜು ನನ್ನ ಮೊಬೈಲ್‍ನ ಬುಟ್ಟಿಗೆ ಬಂದು ಬಿದ್ದಿತ್ತು. ಅದನ್ನು ಓದಿ ಕಣ್ಣು ಹೊರಳಿಸುವಷ್ಟರಲ್ಲಿ ಗೆಳೆತನದ ನವಿರು ನವಿರು ಅನುಭವದ ಅಸಂಖ್ಯ ನೆನಪುಗಳು ಮನಸ್ಸಿನ ಪರದೆಯ ಮೇಲೆ ಮೂಡಿ ನಿಂತವು.ನನ್ನ ಪ್ರಕಾರ ಮನುಷ್ಯ ಸಂಬಂಢಗಳಲ್ಲಿ ಅತ್ಯಂತ ಗಟ್ಟಿಯಾದದ್ದು, ನಿಸ್ಪೃಹವಾದದ್ದು ಸ್ನೇಹ. ತಾಯಿ ಮಗುವಿನ ಸಂಬಂಧದಲ್ಲಿರುವ ಮಮತೆ, ತ್ಯಾಗ, ಅವಲಂಬನೆ, ಗುರು ಶಿಷ್ಯರ ನಡುವಿನ ನಂಟಿನಲ್ಲಿರುವ ಮಾರ್ಗದರ್ಶನ, ಪ್ರೇರಣೆ, ಶರಣಾಗತಿ, ಪ್ರೇಮಿಗಳ ನಡುವಿರುವ ಆರ್ದ್ರತೆ, ಪೊಸೆಸಿವ್‍ನೆಸ್, ನಂಬಿಕೆಗಳೆಲ್ಲವನ್ನೂ ನಾವು ಗೆಳೆತನದ ಬಂಧದಲ್ಲಿ ಕಾಣಬಹುದು. ಅದೂ ರಕ್ತ ಸಂಬಂಧ, ಹಣದ ಲೇವಾದೇವಿ, ದೇಶ ಭಾಷೆಗಳ ಪರಿಧಿಯಿಲ್ಲದೆ.ಎಲ್ಲೋ ಹುಟ್ಟಿ, ತಮ್ಮ- ತಮ್ಮ ಸಂಸ್ಕಾರಗಳಲ್ಲಿ, ಪರಿಸರಗಳಲ್ಲಿ ಬೆಳೆದ ವಿಭಿನ್ನ ಸ್ವಭಾವದ ಇಬ್ಬರು ವ್ಯಕ್ತಿಗಳು ಹಾಗೆ ಯಾವ ಅಪೇಕ್ಷೆಯೂ ಇಲ್ಲದೆ ಒಬ್ಬರಿಗೊಬ್ಬರು ಬಂಧಿಸಲ್ಪಡುವ ಬಗೆಯನ್ನು ನೆನೆದು ನಾನು ಅದೆಷ್ಟೋ ಬಾರಿ ವಿಸ್ಮಯಗೊಂಡಿದ್ದೇನೆ. ಯಾವುದೇ ಕಲ್ಮಷಗಳಿಲ್ಲದ ಗೆಳೆತನವನ್ನು ನಾವು ಕಾಣಬೇಕಾದರೆ ಚಿಕ್ಕ ಮಕ್ಕಳನ್ನು ಗಮನಿಸಬೇಕು. ಮೇಲು ಕೀಳುಗಳೆಂಬ ಜಾತಿಯ ಚೌಕಟ್ಟಿಲ್ಲದೆ, ಬಡವ ಧನಿಕನೆಂಬ ಬೇಧಗಳನ್ನು ಮನಸ್ಸಿನಲ್ಲಿ ತಾರದೆ, ಹೆಣ್ಣು ಗಂಡು ಎಂಬ ಲಜ್ಜೆಯಿಲ್ಲದೆ ಮುಕ್ತವಾಗಿ ಯಾವ ಸ್ವಾರ್ಥವೂ ಇಲ್ಲದೆ ನಲಿಯುವ ಮಕ್ಕಳ ಸನ್ನಿಧಾನದಲ್ಲಿ ನಮಗೆ ಗೆಳೆತನದ ನಿಜವಾದ ಚಿತ್ರಣ ಸಿಕ್ಕೀತು.ಸ್ನೇಹವೆಂಬುದೂ ಪ್ರೀತಿಯ ಹಾಗೆ ಅಮೂರ್ತವಾದದ್ದು. ಅದಕ್ಕೆ ಗುಣ ಲಕ್ಷಣಗಳನ್ನು ಪಟ್ಟಿ ಮಾಡುತ್ತಾ ಕೂರುವುದು ಅಸಾಧ್ಯ. ಗೆಳೆತನದ ಯಾವ ಗುಣಲಕ್ಷಣವನ್ನೂ ಹೊಂದಿರದ ಸಂಬಂಧ ಕೂಡ ನಮ್ಮನ್ನು ತೀರಾ ಆಪ್ತವಾಗಿ ಆವರಿಸಬಹುದು ಇಲ್ಲವೇ ಶ್ರೇಷ್ಠವಾದ ಗೆಳೆತನ ಎಂದು ಗುರುತಿಸಿದ ಸ್ನೇಹದಲ್ಲಿ ಯಾವಾಗ ಬೇಕಾದರೂ ಬಿರುಕುಂಟಾಗಬಹುದು. ಯಾವುದು ಗೆಳೆತನ, ಯಾವುದು ಗೆಳೆತನವಲ್ಲ, ಯಾರು ನಿಜವಾದ ಗೆಳೆಯ, ಯಾರು ಸಮಯ ಸಾಧಕ ಅಂತ ವರ್ಗೀಕರಿಸುವುದು ಅಸಾಧ್ಯ. ಒಂದೊಮ್ಮೆ ಕೇವಲ ಆವಶ್ಯಕತೆಗಳಿಗಾಗಿ ಸ್ಥಾಪಿತವಾದ ಸಂಬಂಧ ಮುಂದೊಂದು ದಿನ ಬಿಟ್ಟಿರಲಾರದ ಬಂಧವಾಗಿ ರೂಪುಗೊಳ್ಳಬಹುದು. ಎಂದೋ ಕ್ಲಾಸಿನಲ್ಲಿ ನೋಟ್ಸ್ ಕೇಳಿದ ಸಹಪಾಠಿ ಜೀವ ಗೆಳೆಯನಾಗಿ ಬೆಳೆಯಬಹುದು. ಚಿಕ್ಕಂದಿನಿಂದ ಇದ್ದ ಸ್ನೇಹದ ಬಂಧ ಬೆಳೆಬೆಳೆಯುತ್ತ ಸಡಿಲವಾಗಿ ಸಂಬಂಧ ಮುರುಟಿಹೋಗಿಬಿಡಬಹುದು. ಒಟ್ಟಿನಲ್ಲಿ ಸ್ನೇಹವೆಂಬುದು ಒಂದು ಅಮೂರ್ತ ಪ್ರಕ್ರಿಯೆ. ಅದರ ಹುಟ್ಟು, ಅಂತ್ಯಗಳು ಗುರುತಿಸಿ ನೋಡಲಾಗದಷ್ಟು ಸಂಕೀರ್ಣ.ನಾನು ಬೆಳೆದ ಮನೆಯ ಪರಿಸರದಿಂದಲೋ ಇಲ್ಲವೇ ನನ್ನ ಒಳಮುಚ್ಚುಗ ಸ್ವಭಾವದಿಂದಲೋ ನನಗೆ ಚಿಕ್ಕಂದಿನಲ್ಲಿ ಅಷ್ಟಾಗಿ ಗೆಳೆಯರ ಗುಂಪು ಇರಲಿಲ್ಲ.ಆದರೂ ಮನೆಯ ಅಕ್ಕಪಕ್ಕದ ಹುಡುಗ-ಹುಡುಗಿಯರೊಂದಿಗೆ ಕೂಡಿ ಆಡಿದ ಆಟಗಳ, ನಲಿದ ಕ್ಷಣಗಳ ನೆನಪು ಮಾಸಿಲ್ಲ. ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ಒಂದು ಸ್ಲಂ ಇದ್ದದ್ದರಿಂದ ಮನೆಯಿಂದ ಹೊರಗೆ ಹೋಗಿ ಆಡುವುದು ನಮಗೆ ನಿಷಿದ್ಧವಾಗಿತ್ತು. ಹಾಗಾಗಿ ಮನೆಯ ಸುತ್ತ ಮುತ್ತ ಸಿಗುತ್ತಿದ್ದ ನಮ್ಮದೇ ವಯಸ್ಸಿನ ಗೆಳೆಯ-ಗೆಳತಿಯರೇ ನಮ್ಮ ಆಸ್ತಿ. ಆಟವಾಡಲು ನಮ್ಮ ಗುಂಪು ನೆರೆದಾಗಲೆಲ್ಲಾ ಯಾವ ಆಟ ಆಡುವುದು ಎಂಬ ಸಮಸ್ಯೆ ಎದ್ದು ನಿಲ್ಲುತ್ತಿತ್ತು. ನಮ್ಮ ಗುಂಪಿನಲ್ಲಿ ಒಂದಿಬ್ಬರು ಉಡುಗಿಯರಿದ್ದರೆ ಅಡುಗೆ ಆಟ, ಟೀಚರ್ ಆಟ ಅಂತ ತೀರ್ಮಾನವಾಗುತ್ತತ್ತು. ಇಲ್ಲದಿದ್ದರೆ ಐಸ್‍ಪೈಸ್, ಬುಗುರಿ, ಗೋಲಿ ಆಡುತ್ತಿದ್ದೆವು. ಚಿನ್ನಿ ದಾಂಡು ಸಭ್ಯರ ಆಟವಲ್ಲ ಎಂದು ನಂಬಿದ್ದರಿಂದ ಅದನ್ನು ಆಡುತ್ತಿರಲಿಲ್ಲ. ರಸ್ತೆಯಲ್ಲಿ ಕೆಲವು ಸ್ಲಮ್ಮಿನಹುಡುಗರು ಓಡಾಡಿದರೆ ಸಾಕು ನಾವು ಆಟ ನಿಲ್ಲಿಸಿ ಮನೆಯೊಳಕ್ಕೆ ಬಂದು ಬಿಡುತ್ತಿದ್ದೆವು.ಅವರು ನಿಮ್ಮ ಅಂಗಿ-ಚಡ್ಡಿ, ಬುಗುರಿಗಳನ್ನು ಕಿತ್ತುಕೊಂಡು ಹೋಗುತ್ತಾರೆ ಅಂತ ಮನೆಯಲ್ಲಿ ಹಿರಿಯರು ಸುಮ್-ಸುಮ್ಮನೇ ಹೆದರಿಸಿದ್ದರಿಂದ ಆ ಎಚ್ಚರಿಕೆ. ಆ ಹುಡುಗರು ಗುಂಪಾಗಿ ರಸ್ತೆಯಲ್ಲಿ ನಡೆದು ಬರುತ್ತಿದ್ದರಂತೂ ಮನ್ಎಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡು ಅವರ ಗುಂಪು ದೂರ ಹೋಗುವವರೆಗೂ ಕಿಟಕಿಯಲ್ಲಿ ಇಣಕಿ ನೋಡುತ್ತಾ ಕುಳಿತಿರುತ್ತಿದ್ದೆವು.ದೀಪಾವಳಿಯ ಸಂಭ್ರಮದಲ್ಲಿ ಒಂದು ವಿಚಿತ್ರವಾದ ಸಂಗತಿ ನಡೆಯುತ್ತಿತ್ತು. ಯಾರ ಮನೆಯಲ್ಲ್ಲಿ ಹೆಚ್ಚು ಪಟಾಕಿ ತಂದಿರುತ್ತಾರೋ ಅವನಿಗೆ ಹೆಚ್ಚೆಚ್ಚು ಗೆಳೆಯರು ಹುಟ್ಟಿಕೊಳ್ಳುತ್ತಿದ್ದರು. ಆತ ಎಡಗೈಲಿ ಊದಿನ ಕಡ್ಡಿ ಬಲಗೈಲಿ ಪಟಾಕಿಯ ಡಬ್ಬಿ ಹಿಡಿದು ಹೊರಬಂದರೆ, ಅವನ ಪಟಾಕಿಯ ಮದ್ದ್ ಕಿತ್ತುಕೊಡುವುದಕ್ಕೆ, ಎರಡೆರಡನ್ನು ಜೋಡಿ ಮಾಡಿ ಹಚ್ಚು, ಆ ನಾಯಿ ಕಾಲ ಹತ್ತಿರ ಹಚ್ಚು, ಈ ಡಬ್ಬಿಯೊಳಗೆ ಇಟ್ಟು ಹಚ್ಚು ಅಂತ ಉಪದೇಶ ಕೊಡುತ್ತಾ ಅಲೆಯುವವರ ಗುಂಪು ನೆರೆದುಬಿಡುತ್ತಿತ್ತು. ಮಧ್ಯೆ ಮಧ್ಯೆ ಅವರು ಅವನ ಪಟಾಕಿಯ ಪಟ್ಟಣದಿಂದ ಒಂದುರೆಡು ಪಟಾಕಿ ತೆಗೆದು ಜೇಬಿಗೆ ಹಾಕಿಕೊಂಡು ಬಿಡುತ್ತಿದ್ದರು. ನನಗೆ ಇಂತಹ ‘ಸಮಯ ಸಾಧಕ’ ಗೆಳೆಯರನ್ನುಕಂಡರೆ ಆಗುತ್ತಿರಲಿಲ್ಲ ಆದರೂ ಹೆಚ್ಚೆಚ್ಚು ಮಂದಿ ನನ್ನ ನೆರೆದಷ್ಟೂ ನನ್ನ ಅಹಂ ಉಬ್ಬಿ ಉಬ್ಬಿ ಆಕಾಶದೆತ್ತರಕ್ಕೆ ವ್ಯಾಪಿಸುತ್ತಿತ್ತು.ಹೀಗೆ ನಾವು ದೀಪಾವಳಿಯ ದಿನ ಹೊಚ್ಚ ಹೊಸ ಬಟ್ಟೆಯನ್ನು ತೊಟ್ಟುಕೊಂಡು ಪಟಾಕಿ ಹಚ್ಚಲು ಅಣಿಯಾಗುತ್ತಿದ್ದರೆ, ಅತ್ತ, ಹಿಂದಣ ರಸ್ತೆಯ ಸ್ಲಮ್ಮಿನ ಮಕ್ಕಳು ಮೊದಲ ಪಟಾಕಿಯ ಸದ್ದಿಗೆ ಕಾದು ಕುಳಿತಿದ್ದವರಂತೆ ಚಂಗನೆ ಹಾರಿ ನಮ್ಮ ಮನೆಯ ಬೀದಿಗೆ ಬಂದು ಬಿಡುತ್ತಿದ್ದರು. ಅವರೇ ನಮ್ಮ ಬಳಿ ಬರಲು ಹೆದರುತ್ತಿದ್ದರೋ ಅಥವಾ ನಾವೇ ಅವರನ್ನು ಬಳಿಗೆ ಬರಲು ಬಿಡುತ್ತಿರಲಿಲ್ಲವೋ, ಒಟ್ಟಿನಲ್ಲಿ ಅವರು ಬೀದಿಯಲ್ಲಿ ನಮ್ಮ ಮನೆಗಳಿಂದ ಮಾರು ದೂರದಲ್ಲಿ ನಿಂತು ನಾವು ಪಟಾಕಿ ಹಚ್ಚುವುದನ್ನು ಕುತೂಹಲದ ಕಣ್ಣುಗಳಿಂದ ಕುಳಿತು ನೋಡುತ್ತಿದ್ದರು. ನಾವು ಪಟಾಕಿಯ ಮದ್ದಿಗೆ ಬೆಂಕಿ ಕೊಡುವಾಗ ಅವರೇ ಬೆಂಕಿಕೊಡುವವರಂತೆ ರೋಮಾಂಚಿತರಾಗುತ್ತಿದ್ದರು, ಪಟಾಕಿಯ ಮದ್ದಿಗೆ ಅಂಟಿಕೊಂಡ ಕಿಚ್ಚು ಸಾಲಲ್ಲಿ ಸಾಗುವ ಇರುವೆಯಂತೆ ಪಟಾಕಿಯ ಹೊಟ್ಟೆಯ ಬಳಿಗೆ ಸಾಗುತ್ತಿದ್ದಷ್ಟು ಹೊತ್ತು ಅವರ ಕಣ್ಣುಗಳಿಂದ ಮುಂದೇನಾಗುವುದೋ ಎಂಬ ಕಾತರ ತುಳುಕುತ್ತಿರುತ್ತಿತ್ತು. ಒಂದು ಸಲ ಕಿಚ್ಚು ಪಟಾಕಿಯ ಹೊಟ್ಟೆಗೆ ನುಗ್ಗಿ ಅದು ಎಣ್ಣೆಯಲ್ಲಿ ಬಿದ್ದ ಪೂರಿಯಂತೆ ಮೈ ಉಬ್ಬಿಸಿಕೊಂಳ್ಳುತ್ತಾ ಹೋದಂತೆಲ್ಲಾ ಅವರ ಕಣ್ಣುಗಳಲ್ಲಿನ ಕಾತರ ಹೆಚ್ಚುತ್ತಿರುತ್ತಿತ್ತು. ಒಮ್ಮೆಗೇ ಅದು ‘ಢಂ’ ಎಂದು ಸಿಡಿದು ಚೂರಾದರೆ ಅವರ ಕಣ್ಣುಗಳಲ್ಲಿ ಸಂಭ್ರಮ ಕುಣಿಯುತ್ತಿರುತ್ತಿತ್ತು. ಅದು ಸಿಡಿಯದೆ ಟುಸ್ಸೆಂದರೆ ನಮ್ಮ ಕಡೆಗೊಮ್ಮೆ ನೋಡಿ ಮುಸಿ-ಮುಸಿ ನಗುತ್ತಿದ್ದರು. ನಾವು ಅತ್ತಿತ್ತ ನೋಡುವಷ್ಟರಲ್ಲಿ ಓಡಿ ಹೋಗಿ ಬಾಗಿ ಸಿಡಿಯದ ಪಟಾಕಿಯನ್ನು ಜೇಬಲ್ಲಿ ಹಾಕಿಕೊಂಡು ಓಡಿಬಿಡುತ್ತಿದ್ದರು. ಅವರು ಹಾಗೆ ಅದನ್ನು ‘ಕದ್ದೊ’ಯ್ಯುವುದನ್ನು ಕಂಡು ನಮ್ಮ ಮೈಯುರಿಯುತ್ತಿತ್ತು. ಓಡಿ ಹಿಡಿಯೋಣ ಅಂದರೆ ನಮಗೆ ಅವರ ಸಮನಾದ ವೇಗದಲ್ಲಿ ಓಡುವ ನಮ್ಮ ಸಾಮರ್ಥ್ಯದ ಬಗ್ಗೆಯೇ ವಿಶ್ವಾಸವಿರಲಿಲ್ಲ. ಮೇಲಾಗಿ ಅವರು ತಿರುಗಿ ನಿಂತುಬಿಟ್ಟರೆ ಎಂಬ ಭಯ ಬೇರೆ. ಆಗ ನನ್ನ ಸುತ್ತ ಇರುತ್ತಿದ್ದ ಗೆಳೆಯರು, ‘ಮರ್ಯಾದೆ ಇಲ್ಲದೋರು’ ಎಂದು ತಮ್ಮ ಅಸಮಧಾನ ಸೂಚಿಸುತ್ತಿದ್ದರು. ಒಮ್ಮೆ ಹೀಗೆ ಒಬ್ಬ ನನ್ನ ವಯಸ್ಸಿನವನೇ ಆದ ಹುಡುಗ ಸಿಡಿಯದ ಪಟಾಕಿಯೊಂದನ್ನು ಚಡ್ಡಿಯ ಜೇಬಲ್ಲಿ ಹಾಕಿಕೊಂಡು ಓಡುವಾಗ ಅದು ಸಿಡಿದು ಬಿಟ್ಟಿತು. ಆತನಿಗಾದ ಗಾಬರಿ, ಭಯ, ದುಃಖವನ್ನು ಕಂಡು ನನ್ನನ್ನೂ ಸೇರಿದಂತೆ ನನ್ನ ಗೆಳೆಯರಿಗೆ ತಡೆಯಲಾರದ ನಗು ಬಂದಿತ್ತು. ‘ತಕ್ಕ ಶಾಸ್ತಿಯಾಯ್ತು’ ಅಂತಲೇ ನಮಗೆಲ್ಲಾ ಅನ್ನಿಸಿತು. ಅವನ ಸುಟ್ಟು - ಹರಿದ ಚಡ್ಡಿ ನಮಗೆ ಅಪಹಾಸ್ಯದ ವಸ್ತುವಾಯಿತೇ ವಿನಃ ಅನುಕಂಪಕ್ಕೆ ಆಸ್ಪದವಾಗಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ನನ್ನಪ್ಪ, ನಮ್ಮನ್ನು ಗದರಿಸಲಿಲ್ಲ ಬದಲಾಗಿ ಆ ಹುಡುಗನನ್ನು ಬಳಿಗೆ ಕರೆದರು. ಆತ ಏನಾಗುವುದೋ ಎಂಬ ಆತಂಕದಲ್ಲಿಯೇ ಅಪ್ಪನ ಬಳಿಗೆ ಹೋದ. ಅಪ್ಪ ಅವನ ಸುಟ್ಟ ತೊಡೆಗೆ ಬರ್ನಾಲ್ ಹಚ್ಚಿ, ನನ್ನ ಪಟಾಕಿಯ ಡಬ್ಬಿಯಿಂದ ಕೊಂಚ ಪಟಾಕಿ ತೆಗೆದು ಆತನ ಕೈಗಿಟ್ಟು ಕಳುಹಿಸಿದರು. ನನಗೆ ಅಪ್ಪನ ವರ್ತನೆಯನ್ನು ಕಂದು ಮೈಯುರಿದುಹೋಯ್ತು. ಯಾವನೋ ಬೀದಿ ದಾಸಯ್ಯನಿಗೆ ನನ್ನ ಪಟಾಕಿ ಕೊಟ್ಟರಲ್ಲಾ ಅಂತ ಕೋಪ ಬಂದಿತು. ಆದರೂ ಏನೂ ಮಾಡಲಾಗದೆ ಸುಮ್ಮನೆ ನಿಂತಿದ್ದೆ.ಅಪ್ಪನಿಂದ ಪಟಾಕಿ ಪಡೆದ ಆ ಹುಡುಗನನ್ನು ನಾನು ಅಸೂಯೆ, ಅಸಹ್ಯ ಬೆರೆತ ಕಣ್ಣುಗಳಿಂದಲೇ ನೋಡುತ್ತಿದ್ದೆ. ನನ್ನ ಸುತ್ತ ಇದ್ದ ಗೆಳೆರಲ್ಲಂತೂ ಅಸೂಯೆ ನೂರ್ಮಡಿಯಾಗಿತ್ತು. ಆ ಪಟಾಕಿಯನ್ನು ನಮಗಾದರೂ ಕೊಟ್ಟಿದ್ದರೆ ಒಂದು ಅರ್ಥವಿರುತ್ತಿತ್ತು ಎನ್ನುವ ವಾದ ಅವರ ಮುಖಭಾವದಲ್ಲಿತ್ತು. ಆ ಹುಡುಗ ಬಳಿಯಲ್ಲೇ ಇದ್ದ ಊದಿನ ಬತ್ತಿ ತೆಗೆದುಕೊಂಡು ಒಂದೆರೆಡು ಪಟಾಕಿಯನ್ನು ಹಚ್ಚಿ ಸಂಭ್ರಮಿಸಿದ. ಕೊನೆಗುಳಿದ ಅರ್ಧದಷ್ಟು ಪಟಾಕಿಯನ್ನು ಎರಡು ಭಾಗ ಮಾಡಿ ಒಂದನ್ನು ತನ್ನ ಚಡ್ಡಿಯ ಇನ್ನೊಂದು ಜೇಬಿನಲ್ಲಿ ತುರುಕಿಕೊಂಡು ಮತ್ತೊಂದು ಭಾಗವನ್ನು ಹಾಗೇ ಕೈಲಿ ಹಿಡಿದುಕೊಂಡ. ಅದನ್ನೇನು ಮಾಡುತ್ತಾನೋ ಅಂತ ನಾವೆಲ್ಲಾ ಕುತೂಹಲದಿಂದ ಎದುರು ನೋಡುತ್ತಿದ್ದೆವು. ಆ ಪಟಾಕಿಗಳನ್ನು ಕೈಲಿ ಹಿಡಿದುಕೊಂಡು ಆತ ನೇರವಾಗಿ ನನ್ನ ದಿಕ್ಕಿನಲ್ಲೇ ಬರಲಾರಂಭಿಸಿದ. ಏನು ಮಾಡುವನೋ ಎನ್ನುವ ಕಾತರದಿಂದ ನನ್ನ ಎದೆಬಡಿತ ಹೆಚ್ಚಾಗುತ್ತಿತ್ತು. ಆತ ನನ್ನ ಬಳಿ ಬಂದವನೇ ಆ ಪಟಾಕಿಗಳನ್ನು ನನ್ನ ಕೈಗೆ ಕೊಟ್ಟು ತನ್ನ ಮಸಿಯಾದ ಹಲ್ಲುಗಳನ್ನು ತೋರಿ ನಗುತ್ತಾ ‘ಥ್ಯಾಂಕ್ಸ್’ ಅಂತ ಹೇಳಿ ಓಡಿ ಹೋಗಿ ತನ್ನ ಗೆಳೆಯರನ್ನು ಸೇರಿಕೊಂಡ. ನಾನು ಮೂಖ ವಿಸ್ಮಿತನಾಗಿ ನೋಡುತ್ತಲೇ ಇದ್ದೆ. ತನ್ನ ಗೆಳೆಯರ ಗುಂಪನ್ನು ಸೇರಿದ ಆತ ತನ್ನ ಜೇಬಲ್ಲಿದ್ದ ಪಟಾಕಿಗಳನ್ನು ತೆಗೆದು ಅವನ್ನೆಲ್ಲಾ ತನ್ನ ಗೆಳೆಯರಿಗೆ ಹಂಚಿಬಿಟ್ಟ. ನಾನು ನೋಡುತ್ತಲೇ ಇದ್ದೆ.ನನ್ನ ಗೆಳೆಯರಲ್ಲೊಬ್ಬ, ‘ನೋಡು ಅವನಿಗೆಷ್ಟು ಧಿಮಾಕು, ನಿನ್ನ ಪಟಾಕಿಯನ್ನು ನಿನಗೇ ಕೊಟ್ಟು ದೊಡ್ಡ ಉಪಕಾರ ಮಾಡಿದೋನಂಗೆ ಹೋಗ್ತಾ ಇದ್ದಾನೆ’ ಅಂದ.ಇನ್ನೊಬ್ಬ, ‘ಅಂತವರಿಗೆ ನಾಚಿಕೆ ಇರೊಲ್ಲ. ಅದ್ಕೆ ಅವರ್ಜೊತೆ ಸೇರ್ಬೇಡ ಅಂತ ನಮ್ಮ ಹೇಳೋದು’ ಅಂದ. ಅವರ ಮಾತುಗಳು ನನ್ನ ಕಿವಿಯೊಳಕ್ಕೆ ಇಳಿಯುತ್ತಲೇ ಇರಲಿಲ್ಲ. ನನ್ನ ಕಣ್ಣು-ಮನಸ್ಸಿನ ತುಂಬ ಆ ಹುಡುಗನ ಮುಖದ ಮೇಲಿದ್ದ ಸಂಭ್ರಮ, ವಿನಂತಿ, ಕೃತಜ್ಞತೆ, ನಾನು ನಿನ್ನವನು ಎಂಬ ಆಸರೆಯೇ ಕವಿದಿತ್ತು.ಗೆಳೆತನ ಎಂದರೇನೆಂಬ ಅನುಭವ ನನಗಾಗಿತ್ತು.
.

3 comments:

vaku said...

hey that was a nice one.
you are a good writer.
all the best for your further writings.

Unknown said...

phercrait's a wonderful

Unknown said...

*ಮನಸ್ಸಿನ ಅಂತರಾಳದ ಮಾತು...*

ಮನಸ್ಸಿನ ಆಳ ಚಿಂತೆಗೆ ಮೀರಿದ್ದು, ಚಿಂತಿಸುವವನಿಗೆ ಮೀರಿದ್ದು, ಮನಸ್ಸಿದ್ದವನು ಮನುಷ್ಯ. ಒಳ್ಳೆ ಮನಸ್ಸು ಅಥವಾ ಒಳ್ಳೆಯದನ್ನು ಯೋಚಿಸುವ ಮನಸ್ಸು ಒಂದುಕಡೆಯಾದರೆ, ಎಲ್ಲೊ ಕೆಲವು ಬಾರಿ ಬೇಡವಾದದ್ದು ಅಥವಾ ಸರಿಯಲ್ಲ ಎಂಬುದು ಹುಟ್ಟುವುದು ಸಹಜ. ಅಂದರೇ, ಎರಡು ಮನಸ್ಸು ಇದೆ ಎಂಬ ಭಾವನೆಯಲ್ಲ, ಮನಸ್ಸಿನಲ್ಲಿ ಎರಡು ತರಹದ ಭಾವನೆಗಳು ಉಂಟು ಎಂದರ್ಥ. ನಿಂತನೀರಿನಂತೆ ಯೋಚಿಸುವ ಮನಸ್ಸು, ಅದು ತಿಳಿನೀರಾಗಿರಬಹುದು ಅಥವಾ ಮಲಿನವಾಗಿರಬಹುದು ಇದು ಒಂದು ವರ್ಗದ ಮನಸ್ಸು. ತೂಗುವ ಉಯ್ಯಾಲೆಯ ಪರಿ ಹಾಗೂ ಅಲ್ಲ ಹೀಗೂ ಅಲ್ಲ ಎಂದು ಎರಡು ಭಾವನೆಯನ್ನು ಒಪ್ಪಿಕೊಳ್ಳದೆ ಕೊನೆಗೆ ಏನೂ ಮಾಡದೆ ಸುಮ್ಮನ್ನೆ ಇರುವುದು. ಹರಿಯುವ ನೀರಿಗೆ ಹಲವು ದಾರಿ, ಝರಿಯಾಗಿ ಹರಿದರು ಸಾಕು ಹೊಳೆಯಾಗುವ ಸಾಮರ್ಥ್ಯ ಹೊಂದಿರುತ್ತದೆ. ಹೀಗೆ ಒಳ್ಳೆಯದ್ದನ್ನು ಯೋಚಿಸುವ ಮನಸ್ಸು ಕಲ್ಪನೆಯ ಅಲೆಗಳನ್ನು ಸೃಷ್ಟಿಸಬಹುದು. ಏನಿದು, ಬರೀ ನೀರು, ಅಲೆ, ಹೊಳೆ, ಉಯ್ಯಾಲೆ ಅಂತೀರಾ... ಪ್ರತಿಯೊಬ್ಬರ ಒಳಗೆ ತಮ್ಮನ್ನು ತಾವು ಎಚ್ಚರಿಸಿಕೊಳ್ಳಲು ಒಬ್ಬ ವ್ಯಕ್ತಿ ಇರುತ್ತಾನೆ, ಅದೇ ಮನಸ್ಸು, ಈ ಮನಸ್ಸು ನಿಮ್ಮನ್ನು ನೆಡೆಸುವವನು. ಒಳ್ಳೆದಾರಿಯೇ ಆಗಲಿ, ಅಂದರೆ ಏಳಿಗೆಯ ದಾರಿ ಕಡೆ ನಡೆಸುತ್ತಾನೆ, ಕೆಲವೊಮ್ಮೆ ತಪ್ಪು ಮಾಡುವಂತೆ ಮಾಡುವನು ಅವನೇ. ಮನಸ್ಸಿನ ವರ್ತನೆ, ಅದರಿಂದ ನಿಮ್ಮ ನಡವಳಿಕೆ, ಎಲ್ಲವೂ ಮನಸ್ಸಿನ ಮೇಲೆ ವಾತಾವರ್ಣದ, ಸ್ನೇಹದ, ಪ್ರೀತಿಯ ಭಾವನೆಗಳು ಪರಿಣಮಿಸುವ ಕಾರಣ ಬಲವಾಗುತ್ತದೆ. ಮನಸ್ಸು ನಮ್ಮೊಳಗಿನ ಗೆಳೆಯ, ನಮ್ಮ ಸಂತೋಷ, ದುಃಖ ಎಲ್ಲವನ್ನು ಸ್ವೀಕರಿಸುವವನು ಮನಸ್ಸು ಎಂಬ ಸ್ನೇಹಿತ. ಒಳ್ಳೆಯದು, ಕೆಟ್ಟದ್ದು ಎಂಬ ಎರಡು ಭಾವನೆಗಳ ಒಡೆಯ ಈ ಮನಸ್ಸು, ಅವುಗಳ ಮಧ್ಯೆ ಜಗಳ ಬಂದಾಗ ಸರಿಯಾಗಿ ನಿರ್ಧರಿಸಿ ನಮ್ಮನ್ನು ಸರಿಯಾದ ನಡೆಸುವವನು ಮನಸ್ಸು. ಮನಸ್ಸಿನ ಮಾತುಗಳು ಬಹಳ ಸೂಕ್ಷ್ಮ, ಮನಸ್ಸು ಪ್ರಯಾಣಿಸುವ ಗಾಡಿಯ ಎರಡು ಎತ್ತುಗಳು, ಒಳ್ಳೆಯ ಕಡೆ ದೃಷ್ಟಿಯನ್ನು ಹರಿಸುವುದಾದರೆ ಎರಡು ಕಣ್ಣುಗಳು. ಸರಿಯಾದ ಹಾದಿಯಲ್ಲಿ ನಡೆಯಬೇಕಾದರೆ ಎರಡು ಕಾಲುಗಳು, ಒಂದು ಒಳ್ಳೆಯ ಕೆಲಸ ಮಾಡಬೇಕಾದರೆ ಎರಡು ಕೈಯಿಗಳು. ಹೀಗೆ, ಎರಡು ಭಾವನೆಗಳು ಮನಸ್ಸಿಗೆ ಆಧಾರ. ಜೀವನದಲ್ಲಿ ಯಾವುದೇ ವಿಷಯವಾಗಲಿ ಮನಸ್ಸಿಗೆ ಬಿಡಿ, ಮನಸ್ಸು ಹೇಳಿದ್ದನ್ನು ಮಾಡಿ, ಮನಸ್ಸು ಮಾಡಿ ಕೆಲಸಗಳನ್ನು ಮಾಡಿ. ಮಾತುಗಳನ್ನು ಆಡುವ ಮುನ್ನ ಮನಸ್ಸನ್ನು ಕೇಳಿ. ಮನಸ್ಸು ನಿಮ್ಮ ಗೆಳೆಯ ಅವನಿಗೆ ಯಾವುದೆ ಅಹಿತಕರವಾದದ್ದು ಮಾಡಬೇಡಿ, ಅವನಿಗೆ ಇಷ್ಟವಿಲ್ಲದ ಕೆಲಸ ನಮಗೂ ಬೇಡ, ನೋವು ಮಾಡದೆ ಸ್ನೇಹ ಉಳಿಸಿ, ಪ್ರೀತಿಯನ್ನು ಗೆಲ್ಲಿ.

*ಮನಸ್ಸಿದ್ದರೆ ನರ ಮನುಷ್ಯ,*
*ಬಯಸಿ ಬರೀ ಹರುಷ,*
*ಇರಲಿ ಕಹಿಯ ಸ್ಪರ್ಶ,*
*ಜೀವನ ಜೇನಾಗಲಿ ಪ್ರತಿ ನಿಮಿಷ...*