Monday, February 25, 2008

ಅಶೋಕ ತಗಡು ಕಥೆ ಬರೆಯಲಿಲ್ಲ

ರಶ್ಮಿ ಕಣ್ಣು ತೆರೆದಾಗ ಸುತ್ತಲೂ ಒಮ್ಮೆ ನೋಡಿ ಏನೊಂದೂ ತಿಳಿಯದೆ ಮಂಕಾದಳು. ತಾನು ಇಲ್ಲೇಕೆ ಇದ್ದೇನೆ, ಏನು ಈ ನೋವು, ಇದೇನು ಆಸ್ಪತ್ರೆಯೇ.. ಅಯ್ಯೋ ಏಕೆ, ಈ ಡ್ರಿಪ್ ಹಾಕಿದ್ದಾರೆ… ಎಂದುಕೊಳ್ಳುತ್ತಲೇ ಗಾಬರಿಯಾಗಿ ಮತ್ತೆ ಪ್ರಜ್ಞೆ ಕಳೆದುಕೊಂಡಳು. ಯಾರನ್ನಾದರೂ ಕೇಳೋಣ ಎಂದರೆ ಸ್ಪೆಷಲ್ ವಾರ್ಡಿನಲ್ಲಿ ಒಂಟಿ ಬೆಡ್ ಮೇಲಿನ ತಾನು ಮಾತ್ರ. ಪಕ್ಕದಲ್ಲಿ ಹಣ್ಣು-ಎಳೆನೀರುಗಳನ್ನು ಜೋಡಿಸಿಟ್ಟಿದ್ದ ಟಿಪಾಯಿ, ಎದುರಿಗೆ ನೆಟ್ಟಗೆ ನಿಂತಿದ್ದ ಕಬ್ಬಿಣದ ಸರಳಿಗೆ ತಲೆಕೆಳಗಾಗಿ ನೇತುಬಿದ್ದ ಡ್ರಿಪ್ ಸ್ಯಾಚೆ, ಅದರಿಂದ ಸಪೂರ ಕೊಳವೆಯುದ್ದಕ್ಕೂ ಹನಿಯಿಕ್ಕುತ್ತಿದ್ದ ಜೀವ ಜಲ! ಎಲ್ಲವನ್ನೂ ನೋಡುತ್ತಿದ್ದಂತೆ ಅರ್ಥವಾಗತೊಡಗಿತು. ಅಶೋಕನ ನೆನಪಾಯಿತು. ಕನಸಿನಲ್ಲೆಂಬಂತೆ ಅವನ ಹೆಸರನ್ನು ಗುನುಗಿದಳು. ತುಟಿ ಬಿಚ್ಚುತ್ತಿದ್ದಂತೆ ತಲೆಯಲ್ಲಿ ಸಿಡಿಲು ಸಿಡಿದಂತಾಯಿತು. ಅಷ್ಟರಲ್ಲಿ ಅಸಾಧ್ಯ ನೋವು ಆಕೆಯ ಪ್ರಜ್ಞೆಯನ್ನು ಕಿತ್ತುಕೊಂಡಿತ್ತು.
****
ಆಲನಹಳ್ಳಿ ಕೃಷ್ಣರ ಗೀಜಗನ ಗೂಡಿನ ಮುಂದೆ ನೀನೇನು ಕಥೆ ಬರೀತೀಯಾ ಬಿಡೋ ಎಂದು ರಶ್ಮಿ ಹೇಳಿದಾಗ ಅಶೋಕ, ತಗಡು ಕಥೆಗಳನ್ನು ಬರಿಯೋನು ಅನ್ನೋ ಥರ ನನ್ನನ್ನ ಹಂಗಿಸ್ತೀಯಾ. ಆಲನಹಳ್ಳಿ ಗ್ರೇಟ್ ಬಿಡು. ಆದ್ರೆ ನಮ್ಮ ಕಾಲದ ತುರ್ತುಗಳೇ ಬೇರೆ ಅಲ್ವಾ ಎಂದು ಥೇಟು ಅನಂತಮೂರ್ತಿ ಥರ ಡೈಲಾಗ್ ಹೊಡ್ದ. ಮಾತು ಕಥೆಯ ಸುತ್ತ ಸುತ್ತುತ್ತಿದ್ರೂ ಬ್ರಿಗೇಡ್ ರಸ್ತೆಯ ಫುಟ್ಪಾತ್ನಲ್ಲಿ ಹೆಜ್ಜೆ ಹಾಕ್ತಿದ್ದ ಅವರಿಬ್ಬರ ಮನಸ್ಸುಗಳು ಮಾತ್ರ ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದವು.
ಆಕೆಯ ಹೆಗಲ ಬಳಸಿದ ಆತನ ಕೈ ಅವಳ ತೋಳಿನ ಸುತ್ತ ಚಿತ್ತಾರ ಬಿಡಿಸುತ್ತಿದ್ದರೆ, ಅವನ ಸೊಂಟ ಬಳಸಿದ್ದ ಆಕೆಯ ಬೆರಳುಗಳು ಪಕ್ಕೆಲುಬುಗಳ ಜತೆ ಲಾಸ್ಯವಾಡುತ್ತಿದ್ದವು. ಮೂರು ವರ್ಷಗಳ ಹಿಂದೆ ಪಠ್ಯವಾಗಿದ್ದ ತೇಜಸ್ವಿ ಅವರ ಚಿದಂಬರ ರಹಸ್ಯದ ಪಾಠ ಕೇಳುತ್ತಾ, ಕೇಳುತ್ತಾ ಅದರಲ್ಲಿನ ಜಯಂತಿ-ರಫಿ ಜೋಡಿ ನಾವೇ ಎಂದು ಅನ್ನಿಸಿದ ಕ್ಷಣವೇ ಆಚೀಚೆ ಡೆಸ್ಕಗಳ ತುದಿಯಲ್ಲಿ ಕೂತಿದ್ದ ರಶ್ಮಿ- ಅಶೋಕರ ಕಣ್ಣುಗಳು ಕಲೆತಿದ್ದವು.
ಅಂದಿನಿಂದ ರಫಿ ಅಶೋಕನಾಗಿ, ಅಶೋಕ ರಫಿಯಾಗಿ, ರಶ್ಮಿ ಜಯಂತಿಯಾಗಿ, ಜಯಂತಿ ರಶ್ಮಿಯಾಗಿ ಕ್ಯಾಂಪಸ್ಸಿನಿಡಿ ಅವರಿಬ್ಬರ ಜೋಡಿ ಚಿದಂಬರ ರಹಸ್ಯದಂತಹ ಕುತೂಹಲಕ್ಕೆ, ಪ್ರಶಂಸೆಗೆ ಕೊನೆಗೆ ಹೊಟ್ಟೆಕಿಚ್ಚಿಗೂ ಕಾರಣವಾಗಿತ್ತು. ಕಲ್ಲು ಬೆಂಚುಗಳಿಂದ ರಸ್ತೆಯಂಚಿನವರೆಗೆ ಚಿದಂಬರ ರಹಸ್ಯವನ್ನು ಪರಸ್ಪರರು ಕೆದಕುವ ಆಟವಾಡುತ್ತಲೇ ಇದ್ದರು. ಕಾಲೇಜಿನ ಸಹಪಾಠಿಗಳಿಂದ ಉಪನ್ಯಾಸಕರವರೆ, ಕ್ಲರ್ಕ್- ಅಟೆಂಡ್ರು ಕೊನೆಗೆ ಕಾಲೇಜ್ ಬಸ್ಸಿನ ಕಂಡಕ್ಟರನ ವರೆಗೆ ಎಲ್ಲರಿಗೂ ಇವರು ಜನುಮದ ಜೋಡಿಯಾಗಿಬಿಟ್ಟಿದ್ದರು.
ಈಗ ಬೆಂಗಳೂರಿನ ಕಂಪನಿಯೊಂದರಲ್ಲಿ ಅಶೋಕ ಭಾಷಾ ವಿಶ್ಲೇಷಕ. ಅವಳು ಬಿಪಿಒ ಎಂಪ್ಲಾಯಿ. ಕೈತುಂಬ ಸಂಬಳ, ಎದೆ ತುಂಬ ಪ್ರೀತಿ-ಪ್ರೇಮದ ಘಮ. ಇನ್ನೇನು ಬೇಕು ಮದುವೆಯ ಬಂಧನಕ್ಕೆ? ಅಶೋಕನೇನೋ ಹೀಗೇ ತುಂಟಾಟವಾಡಿಕೊಂಡು ಇನ್ನಷ್ಟು ದಿನ ಇದ್ದುಬಿಡುವ, ಆಮೇಲೆ ಮದುವೆ-ಗಿದುವೆ ಇದ್ದದ್ದೇ ಎಂಬ ಆಕಾಂಕ್ಷೆಯಲ್ಲಿದ್ದ. ಆದರೆ, ರಶ್ಮಿಯ ಸ್ಥಿತಿ ಬೇರೆಯದೇ ಆಗಿತ್ತು. ಅವಳಿಗೂ ಇಂತಹ ತುಂಟಾಟಗಳ ತುಡುಗಿನ ಹುಡುಗನ ಚೇಷ್ಟೆಗಳಲ್ಲಿ ದಿನ ಕಳೆಯುವುದೇ ಮೋಜು ಎನಿಸುತ್ತಿತ್ತು. ಆದರೆ, ಮನೆಯವರು ಬಿಡಬೇಕಲ್ಲ.
ಪ್ರತಿ ಬಾರಿ ಸಕಲೇಶಪುರಕ್ಕೆ ಹೋದಾಗಲೂ ಮದುವೆಗೆ ಗೊತ್ತು ಮಾಡೋಣ ಎಂಬುದು ಅಪ್ಪ- ಅಮ್ಮನ ವರಾತ. ಜತೆಗೆ ಅಶೋಕನ ಜತೆ ರೋಡ್ ರೋಮಿಯೋ ಆಟ ಅತಿಯಾಗಿರುವುದೂ ಅವರ ಕಿವಿಗೆ ಬಿದ್ದಿದೆ. ಕಾಲೇಜು ದಿನದಿಂದಲೂ ಅನುಮಾನವಿದ್ದ ಅವರಿಗೆ ಈಗ ಎಲ್ಲವೂ ಖಾತ್ರಿಯಾಗಿಬಿಟ್ಟಿದೆ. ಹೋದ ತಿಂಗಳು ಊರಿಗೆ ಹೋದಾಗ ಅವನ್ಯಾರೋ ಲೆಕ್ಷರ್ ಮಗ ಪೆದ್ದುಗುಂಡನಂತಹವನಿಗೆ ತೋರಿಸಿದ್ದರು. ಮೊನ್ನೆ ತಾನೆ ಅಮ್ಮ, ‘ಅವನು ಒಪ್ಪಿದ್ದಾನೆ. ಎಂಗೇಜ್ಮೆಂಟ್ ಮಾಡೋಣ ಅಂತಿದ್ದಾರೆ. ಮುಂದಿನ ವಾರ ನಾಲ್ಕು ದಿನ ರಜೆ ಹಾಕಿ ಬಾ’ ಎಂದಿದ್ದರು. ಅದಕ್ಕೆ ರಶ್ಮಿ ಹೋಗಮ್ಮ, ನನಗೆ ಅವ ಇಷ್ಟವಿಲ್ಲ ಎಂದೂ ಹೇಳಿದ್ದಳು. ಆದರೆ, ಇವರ ರಫಿ-ಜಯಂತಿ ಕಥೆ ಅವರಿಗೆ ಗೊತ್ತಿಲ್ಲದ್ದೇನಲ್ಲವಲ್ಲ, ಹಾಗಾಗೆ ಅವಳು ಹತ್ತನ್ನೆರಡು ಹುಡುಗರನ್ನ ಬೇಡ ಎಂದಿದ್ದು ಎಂಬುದೂ ಅರ್ಥವಾಗಿತ್ತು. ಅದಕ್ಕಾಗೆ ಅವರು ಈ ಸಂಬಂಧವನ್ನು ಹೇಗಾದರೂ ಮಾಡಿ ಗಟ್ಟಿಮಾಡಿಕೊಂಡು ಇವಳನ್ನು ಹೆದರಿಸಿ-ಬೆದರಿಸಿಯಾದರೂ ಒಪ್ಪಿಸಿ ಮದುವೆ ಮಾಡಿಸಬೇಕು. ಮುಂದೆ ದಿನ ಕಳೆದಂತೆ ಎಲ್ಲಾ ಸರಿ ಹೋಗುತ್ತದೆ ಎಂದು ನಿರ್ಧರಿಸಿಯೇ ಆಕೆಗೆ ಫೋನ್ ಮಾಡಿದ್ದರು.
ಅದನ್ನೆಲ್ಲಾ ಅಶೋಕನಿಗೆ ಹೇಳಿದರೆ, ಆತ ಅದಕ್ಯಾಕೆ ಅಷ್ಟೊಂದು ತಲೆ ಬಿಸಿ. ಆಯ್ತು ಬಿಡು. ನಾಡಿದ್ದು ಬುಧವಾರ ನಮ್ಮ ಆಪತ್ಭಾಂಧವ ಇದ್ದಾನಲ್ಲ. ಸಬ್ ರಿಜಿಸ್ಟ್ರಾರ್ ಅವರತ್ರ ಹೋಗಿ ರಿಜಿಸ್ಟರ್ ಆಗಿಬಿಡೋಣ. ಅದಕ್ಕೇನೂ ಏರ್ಪಾಡು ಬೇಕೋ ಅದನ್ನೆಲ್ಲಾ ರಮೇಶ ನಾನೂ ಮಾಡ್ತೀವಿ. ನೀನೇನೂ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದ.
ಅದೇ ಖುಷಿಯಲ್ಲೇ ಆಕೆ, ಈಗ ಬ್ರಿಗೇಡ್ ರೋಡ್ ರೋಮಿಂಗಿಗೆ ಅವನ ಜತೆ ಹೆಜ್ಜೆ ಹಾಕ್ತಾ ಇದ್ದಳು. ಕಣ್ಣ ತುಂಬ ಮದುವೆಯ ಕನಸು, ಅದೂ ಸಂಬಂಧದ ಹೊಸತನವಲ್ಲದಿದ್ರೂ ಬದುಕಿನ ಘಟ್ಟದ ನಿರೀಕ್ಷೆ ಅವಳನ್ನು ಬೇರೆಯದೇ ಜಗತ್ತಿಗೆ ಕೊಂಡೊಯ್ದಿತ್ತು.
ಒಂದು ದೀರ್ಘ ಓಡಾಟದ ಬಳಿಕ ಇಬ್ಬರೂ ರಾತ್ರಿ ಎಂಟರ ಹೊತ್ತಿಗೆ ಭೀಮಾಸ್ ನಲ್ಲಿ ಚಿಕನ್ ಬಿರಿಯಾನಿ ತಿಂದು ಎಂಜಿ ರಸ್ತೆಯಲ್ಲಿ ಆಟೋ ಹಿಡಿಯಲು ಹೊರಟರು. ಎಂಟು ಗಂಟೆಯ ಟ್ರಾಫಿಕ್ ಬುಸಿಯಲ್ಲಿ ರಸ್ತೆಯ ಆಚೆ ಬದಿಗೆ ದಾಟುವುದೇ ಕಷ್ಟವಾಗಿತ್ತು. ಬರ್ರನೆ ಎರಗುವ ಬಸ್ಸು-ಕಾರುಗಳ ನಡುವೆ ಒಂದಿಷ್ಟು ಜಾಗ ಸಿಕ್ಕಿದ್ದೇ ತಡ ಅಶೋಕ, ರಶ್ಮಿಯ ಕೈ ಹಿಡಿದು ಎಳೆದುಕೊಂಡ ನುಗ್ಗಿದ. ಕ್ಷಣ ಉರುಳುವ ಮೊದಲೇ ಯರ್ರಾಬಿರ್ರಿ ಸ್ಪೀಡಲ್ಲಿ ಬಂದ ಸ್ಕಾರ್ಫಿಯೋ ದಡ್ ಎಂದು ಬಡಿಯಿತು. ಅಶೋಕ ಹಾರಿಬಿದ್ದ. ರಶ್ಮಿ ಸರಕ್ಕನೆ ಹಿಂದಕ್ಕೆ ಜರಿದರೂ ಹಿಂದಿನಿಂದ ಬಂದ ಆಟೋ ತಾಗಿ ಕುಸಿದಳು. ಅಶೋಕನ ತಲೆಗೆ ಬಡಿದ ರೋಡ್ ಡಿವೈಡರ್ ರಕ್ತದ ಮಡುವಲ್ಲಿ ಒದ್ದೆಯಾಗಿತ್ತು. ಬಿಟ್ಟ ಕಣ್ಣು ಬಿಟ್ಟಂತೆಯೇ ಇತ್ತು. ಉಸಿರು ನಿಂತಿತ್ತು.
****
ಆಸ್ಪತ್ರೆಯ ಬೆಡ್ ಮೇಲೆ ರಶ್ಮಿ ಮಲಗಿದ್ದಳು. ಪ್ರಜ್ಞೆಯ ಯಾವುದೋ ಆಳದಲ್ಲಿ ಆಕೆ, ಅಶೋಕ ಜತೆ-ಜತೆಯಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಅಶೋಕ ‘ಅಂತೂ ತಗಡು ಕಥೆ ಬರೆಯಲೇ ಇಲ್ಲ ನೋಡು ನಾನು. ಹ್ಞಾಂ, ಏನಂದ್ಕೊಂಡಿದಿಯಾ ನನ್ನನ್ನ’ ಎಂದು ಛೇಡಿಸುತ್ತಿದ್ದ.

No comments: