Monday, February 25, 2008

ಸಂಗ್ರಹ ಕವಿತೆಗಳು..

ಅನಾಮಿಕ ಚೆಲುವೆಗೆ,…
ಸವೆಯದ ಹಾದಿಯಲ್ಲೇ ಆಕೆಯ ಒಡನಾಟ
ಜುಳು-ಜುಳಿಸುವ ಮೋಹಕ ಝರಿಯೇ ಸಂಗಾತಿ;
ಆ ಸುಂದರಿಗೆ ಹೊಗಳಿಕೆಯೇ ಕೇಳಿಲ್ಲ!
ಪ್ರೀತಿಯ ಮಾತು ಇನ್ನೆಲ್ಲಿ?

ಹಸಿರು ಹಾವಸೆಗಟ್ಟಿದ
ಕಲ್ಲ ಹಾಸಿನ ಬದಿಯಲ್ಲಿ
ಮಿನುಗುವ ಹೂ
ಕಗ್ಗತ್ತಲ ರಾತ್ರಿಯಲಿ ಮಿಂಚುವ
ಒಂಟಿ ತಾರೆ ಅವಳ ಚೆಲುವು..

ಅನಾಮಿಕಳಾಗೇ ಉಳಿದ
ಆ ಲೂಸಿಯ ಯಾನ ಮುಗಿದಿದೆ
ಸಮಾಧಿಯಲ್ಲಿ!ಈಗುಳಿದಿರುವುದು
ಅವಳ ಹಂಬಲವಷ್ಟೇ!.....

ತಪ್ಪುಗಳ ಪಹರೆಯಲಿ….

ಇಡಿಯಾಗುವುದೊಂದು
ಮೆಲುನಡಿಗೆಯ ಸಾವು.
ನಾನಂದುಕೊಂಡ, ಕನಸಿದ
ಎಲ್ಲವೂ ತದ್ರೂಪದಂತೆ
ನಿಜವಾದರೆ,…..
ಬದುಕೊಂದು ಕೊನೆಯಿಲ್ಲದ
ಯಶಸ್ಸುಗಳ ಹಳಸಲು ಪಲ್ಲವಿ.
ತಪ್ಪು;
ನನ್ನೆಲ್ಲಾ ಅನಿರೀಕ್ಷಿತ ಅನುಭವದಾಗರ.
ಅದಕ್ಕೆಂದೇ ನನಗೆ ನಾನೇ ವಂಚಿಸಿಕೊಂಡಂತೆ
ತಪ್ಪುಗಳಿಗೆ ಒಡ್ಡಿಕೊಳ್ಳುತ್ತೇನೆ ಸದಾ….
ಆದರೂ,
ನಾ ಸರ್ವಶಕ್ತ, ತುಸು ಜಾಗ್ರತೆ ಜತೆಗಿದ್ದರೆ,
ನಾನೀ ಸ್ವರ್ಗದ ಮೆಟ್ಟಿಲು ಜಾರಲಾರೆನೆನ್ನುವ
ಭ್ರಮೆಯ ಕೂಸು;
ತಪ್ಪಿಗೆ ನಾನೇ ಅಂಜುವ ಪರಿ.
ಕೊನೆಗೂ ತಪ್ಪು-
ನಾನಿರುವ ಪರಿಗೊಂದು ರುಜುವಾತು,
ನಾನಾಗುವ ಸ್ಥಿತಿಗೊಂದು ಕದಲಿಕೆ
ವಾಸ್ತವದ ಹೊರಗುಳಿವ ನನಗೊಂದು ಕಣ್ಗಾವಲು.
ತಪ್ಪುಗಳಿಗೆ ಕಿವಿಯೊಡ್ಡಿದಾಗೆಲ್ಲಾ
ನಾನು ಇಂಚಿಂಚೇ ಬೆಳೆದೆ!

ಮಳೆಯೋ ಮಳೆ ಎದೆಯೊಳಗೆ….

ಅವಳ ಕಣ್ಣಿನ ತುಂಬ
ಮಿಂಚು ಮಿನುಗುವ ಬೆಳಕು…
ಹನಿಒಡೆದ ಬಳಿಕದ ಹೊಂಬಿಸಿಲ
ಎಸಳು ಕಿರುನಗೆಯ ಮಂದಲೆ.
ಅವನ ಕುಡಿನೋಟದ
ಸಿಡಿಲ ತಾಕಿದ ಕ್ಷಣ
ಪ್ರೀತಿಯ ಮಳೆ…. ಧೋ…
ಮಳೆ-ಮನಸ್ಸುಗಳ
ಪುಲಕ- ಮೈಯೊಳಗೆ!!
ಜೀವ ಪ್ರೀತಿಯ
ಘಳಿಗೆಗೆ ಹನಿಯ ಬೆಳಗು!!

1 comment:

Unknown said...

ಡಿಯರ್ ವಿಶಾಲ್,

ಈ ಮೂರೂ ಪದ್ಯ ಹಾಗೂ ನನ್ನ ಒಂದು ಕತೆಯನ್ನು ತಾವು ಇಲ್ಲಿ ಹಾಕಿಕೊಂಡಿದ್ದಕ್ಕೆ ಧನ್ಯವಾದಗಳು... ಆದರೆ, ಸಂಗ್ರಹ ಎಂದು ಹಾಕುವಾಗ ದಯವಿಟ್ಟು ಆ ಬರಹದ ಲೇಖಕರಾರು, ಅದು ಎಲ್ಲಿ ಪ್ರಕಟವಾಗಿತ್ತು ಎಂಬುದನ್ನು ನಮೂದಿಸುವುದು ಸಾಹಿತ್ಯದ ಶಿಷ್ಟಾಚಾರ ಎಂಬುದು ನಿಮಗೆ ಗೊತ್ತಿದೆ ಎಂದುಕೊಂಡಿದ್ದೇನೆ. ಒಬ್ಬ ಲೇಖಕನಾಗಿ ಇದು ನಿಮಗೆ ನನ್ನ ಸಲಹೆ...
ಧನ್ಯವಾದಗಳು...
- ಶಶಿ ಸಂಪಳ್ಳಿ