Friday, February 22, 2008

ಸಂಜೆಯ ಕೆಂಪಿನಲ್ಲಿ ನಿನ್ನ ನೆನಪಾಗಲಿಲ್ಲ ಗೆಳತಿ…


ಪ್ರೀತಿಯ ಗೆಳತಿ,ಅಂದು ಸಂಜೆಯ ಸೂರ್ಯ ನಮ್ಮಿಬ್ಬರನ್ನೂ ಅದ್ಯಾವುದೋ ವಾತ್ಸಲ್ಯ ತುಂಬಿದ ಕಣ್ಣುಗಳೊಂದಿಗೆ ನೋಡುತ್ತಾ ಕತ್ತಲೆಯ ಮನೆಗೆ ಹೋಗುತ್ತಲಿದ್ದ. ಆಗ ತಾನೆ ಬಿದ್ದಿದ್ದ ತುಂತುರು ಮಳೆಯಲ್ಲಿ ಇಡೀ ಮೈದಾನದ ಮೈ ನೆಂದು ಅಪೂರ್ವವಾದ ವಾಸನೆ ಹೊಮ್ಮುತ್ತಿತ್ತು. ಆಗ ತತ್ ಕ್ಷಣ ನನಗೆ ನೆನಪಾದದ್ದು ಹಿಂದೊಂದು ದಿನ ಕಾಲೇಜಿನ ಫೀ ಕಟ್ಟುವಾಗ ಕ್ಯೂನಲ್ಲಿ ನಿನ್ನ ಹಿಂದೆ ನಿಂತಾಗ ನನ್ನ ಇಂದ್ರಿಯಗಳನ್ನೆಲ್ಲಾ ಮಂತ್ರ ಮುಗ್ಧವಾಗಿಸಿದ ನಿನ್ನ ಮುಡಿಯಲ್ಲಿನ ಹೂವ ಘಮ.ನಮ್ಮ ನೂರಾರು ಕನಸುಗಳ ಸೌಧವನ್ನು ಕಟ್ಟುವಷ್ಟು ವಿಶಾಲವಾಗಿದ್ದ ಮೈದಾನದ ನಡು ನಡುವೆ ಒಂದಷ್ಟು ಮಂದಿ ಹುಡುಗ ಹುಡುಗಿಯರು ಕೈ ಕೈಹಿಡಿದು ಓಡಾಡುತ್ತಿದ್ದರು. ಕೆಲವರು ಆಡುವ ಆಟದಲ್ಲಿ ಎಲ್ಲವನ್ನೂ ಮರೆತು ತಲ್ಲೀನರಾಗಿದ್ದರು. ಮತ್ತೊಂದಷ್ಟು ಮಂದಿ ಪ್ರಕೃತಿಯ ಆ ರಮಣೀಯ ಸೌಂದರ್ಯವನ್ನು ಎಡಗಾಲಲ್ಲಿ ಒದೆಯುವ ಭಾವದಲ್ಲಿ ಕುಳಿತು ಶುಷ್ಕವಾದ ಆಲ್‍ಜೀಬ್ರಾ, ಕ್ಯಾಲ್ಕುಲಸ್‌ಗಳಲ್ಲಿ ಮುಳುಗಿದ್ದರು. ಪ್ರಕೃತಿ ತಾನಾಗಿ ಕೊಡಮಾಡುವ ಇಂತಹ ಅಸಂಖ್ಯ ಆನಂದದ ಅವಕಾಶಗಳನ್ನು ಮರೆತು ಎಂದೋ ಒಂದು ದಿನ ಸಿಗುವ ಡಿಗ್ರಿಗಾಗಿ ಇವರು ಯಾಕಿಷ್ಟು ಪರದಾಡುತ್ತಾರೋ ಅಂದುಕೊಂಡೆ. ನಿನ್ನ ಪ್ರೀತಿಯು ನನ್ನ ಆವರಿಸಿಕೊಳ್ಳುವ ಮುನ್ನ ನಾನೂ ಹೀಗೇ ಇದ್ದೆನಲ್ಲಾ ಎಂಬುದು ನೆನಪಾಗಿ, ಮನಸ್ಸು ಹಿಂದಕ್ಕೆ ಹಿಂದಕ್ಕೆ ಓಡಲಾರಂಭಿಸಿತು.ಪ್ರೀತಿ, ಹಾಗಂದರೇನು ಅಂತ ಎಲ್ಲರೂ ಕೇಳ್ತಾರೆ. ಅದೇನು ಅಂತ ಗೊತ್ತಿಲ್ಲದೆ ಎಷ್ಟೋ ಮಂದಿ ಪ್ರೀತಿಸ್ತಾರೆ, ದ್ವೇಷಿಸ್ತಾರೆ, ಒಂದಾಗುತ್ತಾರೆ, ಬೇರೆಯಾಗುತ್ತಾರೆ. ಮನುಷ್ಯನ ಆಸೆ, ಮಹತ್ವಾಕಾಂಕ್ಷೆ, ಆದರ್ಶ, ಸದ್ಗುಣ, ಶಿಸ್ತು, ಆಧ್ಯಾತ್ಮದಂತೆಯೇ ಪ್ರೀತಿಯೂ ಕೂಡ. ಪ್ರೀತಿಗೆ ಆ ಸ್ಥಾನ ಸಾಕು. ಪ್ರೀತಿ ಜೀವನದ ಒಂದು ಭಾಗವಾದರೆ ಸಾಕು. ಪ್ರೀತಿಸುವ ಜೀವಗಳೆರಡು ನಂತರ ಎದ್ದು ಮನೆಗೆ ಹೋಗಿ ಉಣ್ಣಬೇಕು, ದುಡಿಯಬೇಕು. ಪ್ರೀತಿ ಅವಾಸ್ತವ. ಪ್ರೀತಿ ಬೇಜವಾಬ್ದಾರಿತನ. ಪ್ರೀತಿ ಕಪಟ, ಇಲ್ಲದ ಭಾವಗಳನ್ನು ಒಬ್ಬನೇ ವ್ಯಕ್ತಿಯ ಮೇಲೆ ಪ್ರದರ್ಶಿಸುವುದು, ದೇಹದ ಬಯಕೆ, ಹಸಿವುಗಳನ್ನೇ ದೊಡ್ಡ ದೊಡ್ಡ ಪದಗಳ ನೆರಳಲ್ಲಿ ನಿಲ್ಲಿಸಿ ಸುಳ್ಳು ಭಾವನೆಯಲ್ಲಿ ಸಮಯ ಕಳೆಯುವ ಕಪಟತೆ- ಹೀಗೇ ಏನೆಲ್ಲಾ ಮಾತನಾಡುತ್ತಿದ್ದೆ ನಾನು. ನಿನ್ನ ಸನ್ನಿಧಾನದ ಅನುಭೂತಿಯಲ್ಲಿ ಮಿಂದ ತಕ್ಷಣ ನನ್ನ ಮಾತುಗಳೆಲ್ಲಾ ಒಣಗಿದ ಹೂವಿನ ಪಕಳೆಗಳಂತೆ ಎಷ್ಟು ಅನಾಯಾಸವಾಗಿ ಉದುರಿಹೋದವಲ್ಲ! ಮಾತುಗಳ ಸದ್ದೆಲ್ಲಾ ಅಡಗಿ ಹೋಗಿ ಮೌನ ನೆಲೆಯಾಯಿತಲ್ಲ? ಜೀವನವೇ ನಶ್ವರ ಎಂದು ಭಾಷಣ ಮಾಡಿದ ನಂತರ ತೆರೆ-ತೆರೆಯಾಗಿ ಬೀಸುವ ತಂಗಾಳಿಗೆ ಮೆಲುವಾಗಿ ತಲೆದೂಗುವ ಉಪದೇಶಿಯಂತೆ ನನ್ನ ಪಾಡಾಯಿತಲ್ಲ? ಜಗತ್ತನ್ನೇ ಸುಟ್ಟು ಬಿಡುವ ಭೀಕರತೆಯಿಂದ ಅರಚಾಡುವ ಮಗು ಮಗುವಿನ ಮಡಿಲನ್ನು ಸೇರಿದ ಕ್ಷಣ ತನ್ನ ಅಸ್ಥಿತ್ವವನ್ನೇ ಮರೆತು ಒಂದಾಗಿಬಿಡುವಂತೆ ನಾನು ನನ್ನನ್ನೇ ಕಳೆದುಕೊಂಡೆ. ಇದೇನಾ ಪ್ರೀತಿ ಅಂದರೆ?ಪತ್ರ ಮುಗಿದಿಲ್ಲ,
**************
ಅರ್ಧಕ್ಕೇ ನಿಲ್ಲಿಸಿದ ಪತ್ರವನ್ನು ಬರೆಯಲು ಕೂತಾಗಲೆಲ್ಲಾ ಮನಸ್ಸು ವಿಪರೀತ ಹೋರಾಟಕ್ಕೆ ಬೀಳುತ್ತೆ. ಸಂಜೆಯ ಮಂದ ಬೆಳಕಿನ ಹಿನ್ನೆಲೆಯಲ್ಲಿ ಸುಂದರವಾಗಿ ಕಾಣುವ ಮರಗಳಲ್ಲಿರುವ ಗೂಡು ಸೇರುವ ಪಕ್ಷಿಗಳ ನಿರಾಳತೆಯಲ್ಲಿ ನಿನ್ನ ನೆನಪಾಯಿತು. ಮುಂಗಾರಿನ ಮೊದಲ ಮಳೆ ಹನಿ ಶಾಲೆ ಬಿಟ್ಟ ನಂತರ ಓಡಿ ಬಂದು ತಾಯಿಯ ತೆಕ್ಕೆಗೆ ಬಂದು ಬೀಳುವ ಮಗುವಿನ ಹಾಗೆ ನೆಲದ ಒಡಲನ್ನು ಸೇರುವಾಗ ನೀನು ಬಳಿಯಿರಬೇಕಿತ್ತು. ಭರಿಸಲಾಗದ ದುಃಖವನ್ನು, ಅವಮಾನಗಳನ್ನು ಹೊಟ್ಟೆಯಲ್ಲಿ ತುಂಬಿಕೊಂಡು ಜಗತ್ತಿನ ದುಃಖವನ್ನೇ ಮರೆಸುವಂತೆ ನಗಿಸಿದ ಚಾಪ್ಲಿನ್‍ನ ‘ದಿ ಸಿಟಿ ಲೈಟ್ಸ್’ ಸಿನೆಮಾ ನೋಡಿ ಭಾವಿಸುತ್ತಿರುವಾಗ ನೀವು ಪಕ್ಕದಲ್ಲಿರಬೇಕಿತ್ತು - ಹೀಗೆ ಎಂದೂ ನನಗೆ ಅನ್ನಿಸಿಯೇ ಇಲ್ಲ. ಅನ್ನಿಸುವುದೇ ಇಲ್ಲ. ಹೀಗಿದ್ದೂ ನಿನಗೆ ಬರೆಯುವ ಪತ್ರದಲ್ಲಿ ಕಾಡಬೇಡ ಕನಸಲಿ ಬಂದು ಎಂದೇಕೆ ಸುಳ್ಳು ಹೇಳಬೇಕು ಅರ್ಥವಾಗುವುದಿಲ್ಲ. ನಾನದೆಷ್ಟೋ ಪ್ರೇಮ ಪತ್ರಗಳನ್ನು ಓದಿದ್ದೇನೆ, ಪ್ರೇಮ ನಿವೇದನೆಯ ಹಾಡುಗಳನ್ನು ಕೇಳಿದ್ದೇನೆ ಆದರೆ ಎಂದೂ ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು…’ ಅಂತ ನಿನ್ನ ಕೈಹಿಡಿದು ಹೇಳಬೇಕು ಅನ್ನಿಸೋದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಿನಗೊಂದು ಸಲ ಅಪರಾತ್ರಿಯಲ್ಲಿ ಫೋನ್ ಮಾಡಿ ‘ಐ ಲವ್ ಯೂ ಕಣೇ…’ ಅಂತ ಹೇಳೋಕಾಗಿಲ್ಲ. ಇಷ್ಟಕ್ಕೂ ನೀನೇಕೆ ನನಗೆ ಇಷ್ಟವಾಗ್ತಿದ್ದೀಯ ಅನ್ನೋದೇ ನನಗಿನ್ನೂ ಗೊತ್ತಾಗಿಲ್ಲ.
ಮೊನ್ನೆ ಹಾಗೇ ಲಹರಿ ಹಿಡಿದು ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ ಒಂದು ವೇಳೆ ನಾನೊಂದು ಮಳೆಯ ಹನಿಯಾಗಿದ್ದರೆ… ಎಂದು ಯೋಚಿಸುತ್ತಿದ್ದೆ. ದೂರದ ಆಗಸದಿಂದ ಗುರಿಯಿಟ್ಟ ಬಾಣದ ಹಾಗೆ ನೆಲೆದೆಡೆಗೆ ಚಿಮ್ಮುತ್ತಾ ಬರುವಾಗ ಸಿಗುವ ಅನುಭವ ಎಂಥದ್ದು, ನನ್ನ ಮನಸ್ಸಿನಲ್ಲಿ ಆಗ ಏನು ನಡೆಯುತ್ತಿರಬಹುದು, ಬಿಟ್ಟು ಬಂದ ಮುಗಿಲಿನ ನೆನಪು ಕಾಡುತ್ತದೆಯೋ ಇಲ್ಲ ಸೇರಬೇಕಾದ ಭುವಿಯ ಒಲವು ನೆನಪಾಗುತ್ತದೆಯೋ ಇಲ್ಲ, ಸುತ್ತ ನನ್ನ ಹಾಗೆಯೇ ಭುವಿಯೆಡೆಗೆ ಬೀಳುವ ಅನೇಕ ಬಿಂದುಗಳೊಂದಿಗೆ ಕುರಿಯ ಮಂದೆಯಲ್ಲೊಂದರಂತೆ ಕಣ್ಣು ಮುಚ್ಚಿಕೊಂಡು ಧುಮುಕಿಬಿಡುತ್ತಿದ್ದೆನೋ… ಕೈಲಿದ್ದ ಕಾಫಿ ಲೋಟ ಸಣ್ಣಗೆ ಹಗುರಾಗುತ್ತಿತ್ತು. ಓದಲೇಬೇಕು ಅಂತ ಲೈಬ್ರರಿಯಿಂದ ತಂದಿಟ್ಟುಕೊಂಡಿದ್ದ ಪುಸ್ತಕ ಮೇಜಿನ ಮೇಲಿತ್ತು. ನನ್ನಾಣೆಗೂ ಆಗ ನಿನ್ನ ನೆನಪಾಯಿತು ಕಣೆ… ಯಾತಕ್ಕೆ ಅಂತೀಯ, ನಾನು ಮಳೆಯ ಹನಿಯಾದರೆ ನೀನೇನಾಗಬೇಕೆಂದಿರುವೆ ಅಂತ ಕೇಳಬೇಕನ್ನ್ಸಿಸಿತು. ಮರುಕ್ಷಣವೇ ನೀನು ನನ್ನ ಈ ಕಲ್ಪನೆಯನ್ನು ಕೇಳಿ ಬೆರಗಾಗಬಹುದು ಅಂದುಕೊಂಡೆ. ಇಲ್ಲ, ಹಿಂದೊಂದು ಬಾರಿ ನಾನು ಹೀಗೆ ಏನೋ ಕೇಳಿದಾಗ ನೀನು ‘ಅದೆಲ್ಲ ನನಗೆ ಇಷ್ಟವಿಲ್ಲ, ನೀನು ನನ್ನನ್ನು ಎಷ್ಟು ಪ್ರೀತಿಸ್ತಿಯ ಹೇಳು’ ಅಂತ ಗಂಟು ಬಿದ್ದಿದ್ದೆ. ನಾನಾಗ ಸುಳ್ಳುಗಾರನಾಗಲೇ ಬೇಕಾಗಿತ್ತು, ಆದರೂ ಮಾತು ಮರೆಸಿ ಹಾಕಿದ್ದೆ ಅವತ್ತು ನಾನು. ನಿನಗೆ ನನ್ನ ಆಲೋಚನೆಗಳಲ್ಲಿ ಆಸಕ್ತಿಯಿಲ್ಲ ಅನ್ನಿಸಿತು, ಇಂತಹದ್ದನ್ನೆಲ್ಲಾ ಹೇಳಿಕೊಳ್ಳಲು ಆಕೆಯೇ ಸರಿ ಅನ್ನಿಸಿತು.
ಆಕೆಯೋ, ಪಾದರಸವೇ ಮೈತಾಳಿ ಬಂದ ಹುಡುಗಿ. ನಿನ್ನ ಮೆಚ್ಚಿನ ಗೆಳತಿ. ಹಾಗೆ ನೋಡಿದರೆ ಆಕೆ ಕ್ಲಾಸಿನ ಎಲ್ಲರಿಗೂ ಒಳ್ಳೆಯ ಗೆಳತಿಯೇ. ನಿನ್ನಷ್ಟು ಸುಂದರವಾಗಿಲ್ಲ ಆಕೆ. ಒಂದು ಸಲ ನೋಡಿದರೆ ಮತ್ತೆ ತಿರುಗಿ ನೋಡಬೇಕು ಅಂತ ಅನ್ನಿಸದ ರೂಪು. ಆದರೆ ಅದೊಂದೇ ಕಾರಣಕ್ಕೆ ಆಕೆಯನ್ನು ಇಷ್ಟ ಪಡದೆ ಇರಲು ಆಕೆಯೇನು ಷೋಕೇಸ್‍ನಲ್ಲಿಟ್ಟ ಬೊಂಬೆಯೇ? ಆಕೆಗೆ ನಿನಗಿಂತ ಮೃದುವಾದ ಮನಸ್ಸಿದೆ. ಎಲ್ಲರನ್ನೂ ಒಳಕ್ಕೆಳೆದುಕೊಳ್ಳುವಷ್ಟು ವಿಶಾಲವಾದ ಹೃದಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಯಲ್ಲಿ ನಿನಗಿರುವ ಅಂದದ ಬಗೆಗಿನ ಅಹಂಕಾರವಿಲ್ಲ. ಅದಕ್ಕೇ ನಾನು ನನ್ನ ತಿಕ್ಕಲು-ತಿಕ್ಕಲು ಆಲೋಚನೆಗಳನ್ನು, ದಿನಕ್ಕೊಂದರಂತೆ ಹುಟ್ಟುವ ಆದರೆ ಅಷ್ಟೇ ಬೇಗ ಸಾಯುವ ಅಲ್ಪಾಯುಷಿ ಕನಸುಗಳನ್ನು ಹಂಚಿಕೊಳ್ಳಲು ನಾನು ನಿನಗಿಂತ ಹೆಚ್ಚಾಗಿ ಆಕೆಯನ್ನೇ ಬಯಸುವುದು. ಆಕೆಯೂ ಅಷ್ಟೇ ಒಮ್ಮೆಯೂ, ‘ನಿನಗೆಷ್ಟು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ?’ , ‘ನೀನೇಕೆ ರೆಗ್ಯುಲರ್ ಆಗಿ ಶೇವ್ ಮಾಡೊಲ್ಲ?’, ‘ಆ ಸ್ಪೆಕ್ಟ್ಸ್ ತೆಗೆದು ಕಾಂಟ್ಯಾಕ್ಟ್ಸ್ ಹಾಕಿಕೊಳ್ಳಬಾರದಾ’, ‘ರೆಡ್ ಟೀ ಶರ್ಟ್ ನಿನಗೊಪ್ಪಲ್ಲ, ಹಾಕಿಕೊಳ್ಳಬೇಡ’ ಅಂತ ಹೇಳೋದೇ ಇಲ್ಲ. ಆಕೆ ಮನಸ್ಸಿನ ಬೇಗುದಿಗಳನ್ನು, ತನ್ನ ರೂಪಿನ ಬಗೆಗಿನ ಕೀಳರಿಮೆಯನ್ನು, ತನ್ನ ಭವಿಷ್ಯದ ಗುರಿಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾಳೆ. ನಾನೂ ಕೂಡ ಅಷ್ಟೇ, ನಿನಗೆ ಹೇಳಿದಂತೆ ಆಕೆಗೆ ‘ಅವನೊಂದಿಗೆ ಜಾಸ್ತಿ ಸಲಿಗೆಯಿಂದಿರಬೇಡ’, ‘ಹೆಚ್ಚು ಹಾಟ್ ಆಗಿ ಡ್ರೆಸ್ ಮಾಡ್ಕೋಬೇಡ’ ಅಂತೆಲ್ಲಾ ಹೇಳೋದಿಲ್ಲ. ಇಷ್ಟವಿಲ್ಲದಿದ್ದರೂ ಆಕೆಯ ಡ್ರೆಸ್‌ನ್ನು ‘ಓಹ್, ವಂಡರ್‌‍ಫುಲ್’ ಅಂತ ಹೊಗಳುವುದಿಲ್ಲ. ಆಕೆಯೊಡನಿರುವಾಗ ಒಂದು ಸಲವೂ ನನ್ನ ಕ್ರಾಪನ್ನು ತೀಡಿಕೊಳ್ಳಬೇಕು, ಇನ್‍ಶರ್ಟ್ ಸರಿ ಮಾಡಿಕೊಳ್ಳಬೇಕು ಅಂತ ಅನ್ನಿಸೋದಿಲ್ಲ ಗೊತ್ತಾ… ಆಕೆಯೊಂದಿಗೆ ಹಾಗೇ ಕತ್ತಲಾಗುವವರೆಗೂ ಕೂತಿರಬೇಕು ಅನ್ನಿಸೋದೇ ಇಲ್ಲ. ಆಕೆಯನ್ನು ಹೊಳೆಯ ದಂಡೆಯಲ್ಲಿ ಏಕಾಂತವಾಗಿ ಭೇಟಿಯಾಗಬೇಕು ಅಂತ ನಾನು ಆಲೋಚಿಸುವುದೇ ಇಲ್ಲ. ನನ್ನಾಣೆಗೂ ಹೇಳ್ತೀನಿ ಆಕೆಯನ್ನು ಪ್ರೀತಿಸುತ್ತಿದ್ದೀನಾ ಅಂತ ಒಂದೇ ಒಂದು ಬಾರಿಯೂ ನಾನು ಕೇಳಿಕೊಂಡಿಲ್ಲ.
ನೀನು ಅಸೂಯೆ ಪಡ್ತೀಯ ಅಂತ ಗೊತ್ತು ಆದರೂ ಹೇಳ್ತೀನಿ ಕೇಳು, ನನಗೆ ದಿನವೊಂದರಲ್ಲಿ ನಿನಗಿಂತ ಹೆಚ್ಚು ಬಾರಿ ಅವಳೇ ನೆನಪಾಗ್ತಾಳೆ. ಅವಳಿದ್ದಿದ್ರೆ ಈ ಸಿನೆಮಾ ಬಗ್ಗೆ ಏನಂತ ಮಾತಾಡ್ತಿದ್ದಳು, ಅವಳಿಗೆ ಈ ಪುಸ್ತಕ ಇಷ್ಟವಾಗ್ತಿತ್ತಾ ಅಂತ ಪದೇ ಪದೇ ಕೇಳಿಕೊಳ್ತಿದ್ದೆ. ಹಾಗೆ ಆಕೆಯ ನೆನಪಾದಾಗಲೆಲ್ಲಾ ಮಿಂಚಿನ ಹಿಂದೇ ಬರುವ ಗುಡುಗಿನ ಹಾಗೆ ನಿನ್ನ ನೆನಪಾಗುತ್ತದೆ. ನಿನ್ನ ಕಪಟವಿಲ್ಲದ ನಗೆ ನೆನಪಾಗುತ್ತೆ, ನನಗಾಗಿ ಅಂದು ಮಳೆಯಲ್ಲೇ ನೆನೆದು ಮನೆಯವರೆಗೂ ಬಂದು ಊಟ ಕೊಟ್ಟುಹೋದ ಘಟನೆ ನೆನಪಾಗುತ್ತೆ. ಆದರೆ ಮೊದಲೇ ಹೇಳಿದೆನಲ್ಲಾ, ಇವೆಲ್ಲಾ ಒಂದೇ ಕ್ಷಣ, ಮರುಘಳಿಗೆ ಟಿವಿಯಲ್ಲಿ ನೋಡಿದ ಅಧ್ಭುತವಾದ ಸಿನೆಮಾ, ರಸ್ತೆಯ ತಿರುವಲ್ಲಿ ಸಿಕ್ಕ ಹೈಸ್ಕೂಲ್ ಹುಡುಗಿ, ಆರ್ಕುಟ್ಟಿನಲ್ಲಿ ಅಕಸ್ಮಾತಾಗಿ ಭೇಟಿಯಾದ ಹಳೆಯ ಗೆಳತಿಯ ಚಿತ್ರ ಮನಸ್ಸನ್ನಾವರಿಸುತ್ತೆ. ಹೀಗಿರೋವಾಗ ನಿನ್ನ ನೆನಪು ನನ್ನ ಕಾಡುತಿದೆ ಅಂತ ಹೇಗೆ ಹೇಳಲಿ…
ಪತ್ರದ ಅಂತ್ಯ ಇನ್ನೂ ದೂರವಿದೆ,

No comments: