Tuesday, February 5, 2008

ಸಂಗ್ರಹ ಕವಿತೆಗಳು...

ಈಗೀಗ ರಾತ್ರಿಗಳಲ್ಲಿ
ಈಗೀಗ ರಾತ್ರಿಗಳಲ್ಲಿ
ಅವನು ಸೂತ್ರಗಳನ್ನು
ಸಡಿಲಗೊಳಿಸುತ್ತಿರಬೇಕು
ಆಕಾಶಕ್ಕೆ ಅಂಟಿಕೊಂಡ ಚುಕ್ಕಿಗಳೆಲ್ಲ
ಧಪ್ ಎಂದು ಮನೆಯಂಗಳದಲ್ಲಿ
ಬೀಳುತ್ತಿವೆ ; ಪಂಜುಗಳಾಗುತ್ತಿವೆ.
ಸ್ವಲ್ಪ ಮಿಸುಕಾಡಿದರೂ ಸಾಕು
ನಾನು ಹೊತ್ತಿಕೊಳ್ಳುತ್ತೇನೆ.
ಜೊತೆಗೆ ನನ್ನ ಗುಡಿಸಲು,
ಸುತ್ತಲಿನ ಕಪ್ಪು ಭೂಮಿ.
ಸಂಜೆಗಳಲ್ಲಿ ಮೂಲೆ ಸೇರಿ
ಬಿಡುತ್ತೇನೆ,ಏಳುವುದೇ ಇಲ್ಲ.
ಚುಕ್ಕಿಗಳು ಬೀಳುತ್ತಲೇ ಇವೆ.
ನನಗೆ ತಲೆಭಾರ.
ಈಗೀಗ ರಾತ್ರಿಗಳಲ್ಲಿ
ನಾನು ಅರೆ ಹುಚ್ಚಿ.,.,.,.,.,.,.,.,.,.,.,.,.,.,.,,.


ತಿಳಿದಿರಲಿಲ್ಲ
ಸೆರಗಂಚಿನಿಂದ ಕಣ್ಣೀರ ಒರೆಸಿ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು
ಮೆಲ್ಲನೆ ನೀವು ಹೊಸ್ತಿಲನು
ದಾಟಿಕದ ಹಿಡಿದು ಹಿಂತಿರುಗಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಹೊನ್ನ ದಿನವೆಂದು
ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು
ಮಲ್ಲಿಗೆ ಬಳ್ಳಿಯಿಂದಾರಿಸಿ
ಬಿರಿದ ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು
ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು,.,..,.,..,..,,.,.,.,..,,.,,.


ಚುಕ್ಕಿಗಳ ನಡುವೆ
ಬೆಳಗಿನಂಗಳದಲ್ಲಿ
ಸಾಲು ಚುಕ್ಕಿಯನಿಟ್ಟು
ರಂಗೋಲಿ ಇಡುವಾಗ
ಮೊದಲ ಚುಕ್ಕಿಗಳಲ್ಲಿ
ಅವನ ಕಣ್ಣು ಮೂಡಿ
ನನ್ನ ನೋಡುವುದೇಕೆ?

ರೇಖೆಯಾಟದಲ್ಲಿ
ಚುಕ್ಕಿಗಳ ಮೇಲೆ
ಇನ್ನೊಂದು ಗೆರೆಯನೆಳೆಯೆ
ಅವನ ತುಟಿಯು ಮೂಡಿ
ನನ್ನ ನಗಿಸುವುದೇಕೆ?

ಇಬ್ಬನಿಯ ಈ ಹೊತ್ತಿನಲಿ
ನಾ ಬರೆದ ಚಿತ್ರದಲಿ
ಅವನ ಚಂದ್ರ
ಮುಖ ಮೂಡಿ
ನನ್ನ ಮನದಾಳದಲಿ
ಬೆಳದಿಂಗಳ ತುಂಬುವುದೇಕೆ?.,.,.,.,.,.,.,.,,.,.


ನೀನೊಮ್ಮೆ ನನ್ನ ನೋಡಬಾರದೇ?
(ಆತನ ಹಂಬಲ)
ಕೇರಿಯ ಗೆಳತಿಯರೊಂದಿಗೆ ನಗುತ
ಕೊಡಪಾನವ ಹೊತ್ತು
ಬಾವಿಕಟ್ಟೆಗೆ ಬಂದು
ಮತ್ತೆ ನಗುತಲೆ
ಬಂಡಿಗೆ ಹಗ್ಗವ ಹಾಕಿಕೊಡದ
ಕುತ್ತಿಗೆಗೆ ನುಣಿಕೆಯ ಕಟ್ಟುತ್ತ
ನೀರೊಳಗೆ ಕೊಡವ ಬಿಟ್ಟು
ಏನನ್ನೋ ಹೇಳಿ ನಗುವಳು
ಹಗ್ಗವ ಎತ್ತಿ, ಬಿಡುತ್ತ
ನೀರು ತುಂಬಿತೇ? ಎಂದು ನೋಡುವಳು

ತುಂಬಿದ ಕೊಡವನೆತ್ತಿ
ಸೊಂಟದ ಮೇಲೆ ಇಡುತ್ತ
ಮನೆಯತ್ತ ಸಾಗುವಳುಆಯಿತೇನೆ?
ಎಂದು ಗುಂಪಿನಿಂದ ಕೂಗಿದರೆ
ಇನ್ನೊಂದು ದಾರಿ ಎಂದು ಅವಳನ್ನಲು
ಅಬ್ಬ ಎನ್ನುವುದು ನನ್ನೆದೆ
ಇಲ್ಲೆ ನಿಂತಿರುವೆ,ಇಲ್ಲೆ ನಿಲ್ಲುವೆ
ನಿನ್ನ ದಾರಿಗಳು ಮುಗಿಯುವವರೆಗೂ
ನೀನೊಮ್ಮೆ ನನ್ನ ನೋಡಬಾರದೇ?...................

!ಒಳಗೆ- ಹೊರಗೆ
ನನ್ನಾಚೆ ಒಂದು ಜಗವಿದೆ
ನನ್ನೊಳು ಮತ್ತೊಂದು ಲೋಕ
ಹೊರಗೊಂದು ತಾಳ
ಒಳಗೊಂದು ತಾಳ, ಮೇಳವಿಲ್ಲ!

ಹೊರಗೆ ಉದಯ
ಒಳಗೆ ಅಸ್ತ
ಹೊರಗಿನ ಬೆಳಕಿನೊಡನೆ
ಬೆಳಗಲೊಒಳಗೆ
ಬೆಳಕನ್ನು ಅರಸಲೊ
ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ

ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ
ಹೊರಗೆ ತುಂತುರಿನ ತನನ
ಒಳಗೆ ಬತ್ತಿದೆ ಮನ
ಹನಿಯೊಡನೆ ಹನಿಯಲೊ
ಮರುಭೂಮಿಯಾಗಲೊ
ಮನವ ಬಿಟ್ಟು ಲೋಕವಿಲ್ಲ
ಲೋಕದಲ್ಲಿ ಮನವಿಲ್ಲ
ಎತ್ತ ಕಿವಿಗೊಡಲಿ?ಎಲ್ಲಿ ಮನವಿಡಲಿ!..............

1 comment:

Unknown said...

Vishaal
tuMbaanE chennaagide, nimma kavithe, thyaaMks.

gOpInaatha